ಮೈಸೂರು:ಇಂದು ಮೈಸೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ವೀರಗಾಸೆ, ತಮಟೆ, ಮಂಗಳವಾದ್ಯ ಹಾಗು ಡೂಳ್ಳು ಬಾರಿಸುವ ಮೂಲಕ ಅದ್ಧೂರಿಯಾಗಿ ಸ್ವಾಗತ ಕೋರಿದರು. ವಿಮಾನ ನಿಲ್ದಾಣದ ಆವರಣದಲ್ಲಿ 'ನಾವು ನಿಮ್ಮಂದಿಗೆ' ಎಂದು ಪೋಸ್ಟರ್ ಪ್ರದರ್ಶಿಸಿ ಬೆಂಬಲ ಸೂಚಿಸಿದರು. ಡಿಸಿಎಂ, ಸಿಎಂ ಪರ ಘೋಷಣೆಗಳನ್ನು ಕೂಗುತ್ತಾ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದರು.
ಮುಡಾ ಹಾಲಿ ಅಧ್ಯಕ್ಷರಿಗೆ ಧಿಕ್ಕಾರ:ಸಿಎಂ ಅಗಮನದ ಹಿನ್ನೆಲೆಯಲ್ಲಿ ಸ್ವಾಗತಿಸಲು ಬಂದಿದ್ದ ಮುಡಾ ಹಾಲಿ ಅಧ್ಯಕ್ಷ ಮರೀಗೌಡ ಅವರ ವಿರುದ್ಧ ಸಿಎಂ ಅಭಿಮಾನಿಗಳು ತೀವ್ರ ಆಕ್ರೋಶ ಹೊರಹಾಕಿದರು. "ನಿನ್ನಿಂದಲೇ ಇಷ್ಟೆಲ್ಲವೂ ಆಗಿರುವುದು, ಸಿಎಂ ಪರಿಸ್ಥಿತಿಗೆ ನೀನೇ ಕಾರಣ" ಎಂದು ಹಲ್ಲೆ ನಡೆಸಲೂ ಮುಂದಾದರು.
ಸಿಎಂ ಸಿದ್ದರಾಮಯ್ಯಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ, ಬಿಜೆಪಿಯಿಂದ ಪ್ರತಿಭಟನೆ (ETV Bharat) ಈ ವೇಳೆ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದರು. ಮುಡಾ ಅಧ್ಯಕ್ಷರನ್ನು ಕಾರಿನ ಮೂಲಕ ವಿಮಾನ ನಿಲ್ದಾಣದಿಂದ ಹೊರಗೆ ಕಳುಹಿಸಲಾಯಿತು.
ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ - ಕಾರ್ಯಕರ್ತರ ಬಂಧನ:ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಮೈಸೂರು ಜಿಲ್ಲಾ ಬಿಜೆಪಿ ಪ್ರತಿಭಟನೆ ನಡೆಸಿತು. ಮುಖ್ಯಮಂತ್ರಿ ಭಾಗವಹಿಸುವ ಕೆಡಿಪಿ ಸಭೆಗೆ ನುಗ್ಗಲು ಯತ್ನಿಸಿದ ಬಿಜೆಪಿ ಶಾಸಕ ಶ್ರೀವತ್ಸ ಸೇರಿದಂತೆ ಇತರ ಮುಖಂಡರನ್ನು ಪೊಲೀಸರು ಬಂಧಿಸಿದರು.
ಬಿಜೆಪಿ ಪ್ರತಿಭಟನೆ (ETV Bharat) ಇಂದಿನಿಂದ ಮೂರು ದಿನಗಳ ಕಾಲ ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮೊದಲು ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಸಿದರು. ಆ ಸಭೆಗೂ ಮುನ್ನ ಸಿಎಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಘಟಕ ನಗರದ ಬಿಜೆಪಿ ಕಚೇರಿಯೆದುರು ಪ್ರತಿಭಟನೆ ನಡೆಸಿತು. ಬಳಿಕ ಜಿಲ್ಲಾ ಪಂಚಾಯತ್ನಲ್ಲಿ ನಡೆಯಲಿರುವ ಕೆಡಿಪಿ ಸಭೆಯಲ್ಲಿ ಭಾಗವಹಿಸಲು ಬರುತ್ತಿದ್ದ ಸಿದ್ದರಾಮಯ್ಯ ಅವರಿಗೆ ಶ್ರೀವತ್ಸ ಸೇರಿದಂತೆ ಪ್ರಮುಖ ಮುಖಂಡರು ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಶಾಸಕರು, ಸ್ಥಳೀಯ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ಅಹಿತರಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ.
ಇದನ್ನೂ ಓದಿ:ಪಕ್ಷ ಸಿಎಂ ಬೆನ್ನಿಗೆ ನಿಂತಿದೆ, ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್ - DCM D K Shivakumar