ಬೆಂಗಳೂರು: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಂಧನಕ್ಕೊಳಗಾಗಿರುವ ರಾಜ್ಯದ ರೈತರನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸುವಂತೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸೂಚನೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಇಂದು ಶೂನ್ಯವೇಳೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ವಿಷಯ ಪ್ರಸ್ತಾಪಿಸಿ, ದೇಶಾದ್ಯಂತ 200ಕ್ಕೂ ಹೆಚ್ಚು ರೈತ ಸಂಘಟನೆಗಳು ದೆಹಲಿ ಚಲೋ ಹಮ್ಮಿಕೊಂಡಿವೆ. ರಾಜ್ಯದಿಂದ 25 ಮಹಿಳೆಯರೂ ಸೇರಿ 75 ಜನ ರೈತರು ಅದರಲ್ಲಿ ಭಾಗವಹಿಸಲು ತೆರಳುತ್ತಿದ್ದರು. ಭೋಪಾಲ್‌ನಲ್ಲಿ ಸೋಮವಾರ ಅವರನ್ನು ಬಂಧಿಸಲಾಗಿದೆ. ಅಲ್ಲದೆ ಅವರನ್ನು ಉಜ್ಜಯನಿಗೆ ಸ್ಥಳಾಂತರಿಸಲಾಗಿದೆ. ರಾಜ್ಯ ಸರ್ಕಾರ ಅವರನ್ನು ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಸರ್ಕಾರದ ಪರವಾಗಿ ಉತ್ತರಿಸಿದ ಸಮಾಜಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಸಾಮಾಜಿಕ ಚಳವಳಿ ಮತ್ತು ಸಂವಿಧಾನ ಹಕ್ಕುಗಳನ್ನು ಹತ್ತಿಕ್ಕುವುದು ಯಾವುದೇ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಪ್ರತಿಭಟನೆಗೆ ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ರೈತರನ್ನು ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಹಂತದಲ್ಲಿ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಮಧ್ಯಪ್ರದೇಶದ ಜೊತೆ ಚರ್ಚೆ ಮಾಡಿ ರೈತರನ್ನು ಬಿಡುಗಡೆ ಮಾಡಿಸಿ ಎಂದು ಸಲಹೆ ಮಾಡಿದರು.
ಇದನ್ನೂ ಓದಿ:ದೆಹಲಿ ಚಲೋ ಹೋರಾಟ: ಭೋಪಾಲ್‌ನಲ್ಲಿ ಕರ್ನಾಟಕದ ರೈತರು ಪೊಲೀಸ್ ವಶಕ್ಕೆ, ಉಜ್ಜಯಿನಿಗೆ ಸ್ಥಳಾಂತರ
ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶದಾದ್ಯಂತ ರೈತರು ದೆಹಲಿ ಚಲೋ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟದಲ್ಲಿ ಭಾಗಿಯಾಗಲು ಕರ್ನಾಟಕದಿಂದ ತೆರಳುತ್ತಿದ್ದ ರೈತ ಮುಖಂಡರನ್ನು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಪೊಲೀಸರು ತಡೆದಿದ್ದಾರೆ. ಸದ್ಯ ಭಾರೀ ಪೊಲೀಸ್ ಭದ್ರತೆಯೊಂದಿಗೆ ರೈತರನ್ನು ಮಂಗಳವಾರ ಉಜ್ಜಯಿನಿ ರೈಲು ನಿಲ್ದಾಣದಲ್ಲಿ ಇಳಿಸಲಾಗಿದೆ.
ಬಂಧನಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ್ದ ಕರ್ನಾಟಕದ ರೈತ ಮಹಿಳೆ ಪದ್ಮ ಶಾಂತಕುಮಾರ್, ''ನಾವೆಲ್ಲ ದೆಹಲಿಗೆ ತೆರಳುತ್ತಿದ್ದೆವು. ಆದರೆ, ಭೋಪಾಲ್‌ನಲ್ಲಿ ಎಸಿಪಿ ನೇತೃತ್ವದಲ್ಲಿ ಪೊಲೀಸರು ಬಲವಂತವಾಗಿ ನಮ್ಮನ್ನು ತಡೆದಿದ್ದಾರೆ. ರೈಲಿನಿಂದ ಎಳೆದು ಕೆಳಗಿಳಿಸಿದ್ದಾರೆ. ಈ ಸಂದರ್ಭದಲ್ಲಿ ನನ್ನ ತಲೆ, ಕಾಲಿಗೆ ಪೆಟ್ಟು ಬಿದ್ದಿದೆ. ರಾತ್ರಿಯಿಡೀ ನಮಗೆ ಪೊಲೀಸರು ತುಂಬಾ ತೊಂದರೆ ಕೊಟ್ಟಿದ್ದಾರೆ. ಈ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು'' ಎಂದು ಒತ್ತಾಯಿಸಿದ್ದರು.
ರೈತರು ಪಾದಯಾತ್ರೆ, ಟ್ರಾಕ್ಟರ್ಗಳು ಮೂಲಕ ದೆಹಲಿಯತ್ತ ಸಾಗಿದ್ದರಿಂದ ಗಡಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದರ ನಡುವೆ ಚಂಡೀಗಢದ ಅಂಬಾಲಾದ ಶಂಭು ಗಡಿಯಲ್ಲಿ ರಸ್ತೆಗೆ ಹಾಕಿದ್ದ ಬ್ಯಾರಿಕೇಡ್ಗಳನ್ನು ರೈತರು ತೆಗೆದುಹಾಕಲು ಮುಂದಾಗಿದ್ದರು. ಈ ವೇಳೆ, ಹರಿಯಾಣ ಪೊಲೀಸರು ಅಶ್ರುವಾಯು ಶೆಲ್‌ಗಳ ಮೂಲಕ ರೈತರನ್ನು ತಡೆಯಲು ಯತ್ನಿಸಿದ್ದಾರೆ. ದೆಹಲಿ ಚಲೋ ಹೋರಾಟ 2ನೇ ದಿನಕ್ಕೆ ಕಾಲಿಟ್ಟಿದ್ದು, ಸಾವಿರಾರು ಅನ್ನದಾತರು ದೆಹಲಿಯತ್ತ ಸಾಗುತ್ತಿದ್ದಾರೆ.