ಕರ್ನಾಟಕ

karnataka

ETV Bharat / state

ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ: ಸಚಿವ ಶಿವರಾಜ ತಂಗಡಗಿ - Shivaraj Tangadagi - SHIVARAJ TANGADAGI

''ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಶನ್ ಕೊಡೋದು ನಮಗೆ ಮೊದಲೇ ಗೊತ್ತಿತ್ತು. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ'' ಎಂದು ಸಚಿವ ಶಿವರಾಜ ತಂಗಡಗಿ ಕಿಡಿಕಾರಿದರು.

PROSECUTION AGAINST CM  CM SIDDARAMAIAH  SHIVARAJ TANGADAGI
ಸಚಿವ ಶಿವರಾಜ ತಂಗಡಗಿ (ETV Bharat)

By ETV Bharat Karnataka Team

Published : Aug 17, 2024, 4:48 PM IST

ಸಚಿವ ಶಿವರಾಜ ತಂಗಡಗಿ ಪ್ರತಿಕ್ರಿಯೆ (ETV Bharat)

ಕೊಪ್ಪಳ:''ರಾಜ್ಯಪಾಲರು ಪ್ರಾಸಿಕ್ಯೂಶನ್ ಕೊಡೋದು ನಮಗೆ ಮೊದಲೇ ಗೊತ್ತಿತ್ತು. ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ರಾಜ್ಯಪಾಲರು ಕೆಲಸ ಮಾಡ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಮಾತು ಕೇಳಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಶಿಕ್ಯೂಶನ್​ಗೆ ಅನುಮತಿ ನೀಡಿದ್ದಾರೆ'' ಎಂದು ಸಚಿವ ಶಿವರಾಜ ತಂಗಡಗಿ ಆರೋಪಿಸಿದರು.

ಇಂದು ಕೊಪ್ಪಳದ ಮುನಿರಾಬಾದ್​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ವಿರುದ್ಧ ಪ್ರಾಸಿಕ್ಯೂಶನ್ ಅನುಮತಿ ನೀಡಿದ ವಿಚಾರಕ್ಕೆ ಪ್ರತ್ರಿಕ್ರಿಯಿಸಿದರು. ''ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಹೀಗೆ ಮಾಡಲಾಗುತ್ತಿದೆ‌. ಇದರಲ್ಲಿ ಸಿಎಂ ಸಿದ್ದರಾಮಯ್ಯನವರ ಯಾವ ಪಾತ್ರವೂ ಇಲ್ಲ. ಕಳೆದ ಲೋಕಸಬೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ನೇರವಾಗಿ ಮಾತಾಡಿರೋದಕ್ಕೆ ಈಗ ಶಿಕ್ಷೆ ಕೊಡಲು ಮುಂದಾಗಿದ್ದಾರೆ. ಜೊತೆಗೆ ಸಿಎಂ ಸಿದ್ದರಾಮಯ್ಯ ಅವರ ಜನಪ್ರಿಯತೆ ಹೆಚ್ಚುತ್ತಿರುವುದು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಬಿಜೆಪಿಯವರು ರಾಜಭವನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ರಾಜ್ಯಪಾಲರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸುತ್ತೇವೆ. ನಾವೆಲ್ಲರೂ ಸಿಎಂ ಸಿದ್ದರಾಮಯ್ಯನವರ ಜೊತೆಗೆ ನಿಲ್ಲುತ್ತೇವೆ'' ಎಂದರು.

ಸಿಎಂ ಬದಲಾವಣೆ ಪ್ರಶ್ನೆ ಇಲ್ಲ- ತಂಗಡಗಿ:''ಸದ್ಯ ಸಿಎಂ ಹುದ್ದೆ ಬದಲಾವಣೆಯ ಪ್ರಶ್ನೆಯೇ ಇಲ್ಲ. ಬಿಜೆಪಿಯವರು ಯಾವ ಮುಖ, ಯಾವ ನೈತಿಕತೆ ಇಟ್ಟುಕೊಂಡು ರಾಜೀನಾಮೆ ಕೇಳುತ್ತಿದ್ದಾರೆ. ಈ ಹಿಂದೆ ಬಿ ಎಸ್​ ಯಡಿಯೂರಪ್ಪ ಜೈಲಿಗೆ ಹೋದಾಗ ಅವರ ಮಗ ಬಿ ವೈ ವಿಜಯೇಂದ್ರ ಏನ್ ಮಾಡುತ್ತಿದ್ದರು? ಅನ್ನೋದನ್ನು ಅವರದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳುತ್ತಾರೆ. ಅವರನ್ನೇ ಕೇಳಿ, ಇದರಲ್ಲಿ ಯಾವುದೇ ರಾಜೀನಾಮೆ ಪ್ರಶ್ನೆ ಬರಲ್ಲ, ಬಿಜೆಪಿಯ ಯತ್ನಾಳ ಅವರೇ ಯಾವ ಮುಖ ಇಟ್ಕೊಂಡು ಪಾದಯಾತ್ರೆ ಮಾಡುತ್ತಿರಿ ಅಂತ ವಿಜಯೇಂದ್ರನನ್ನೇ ಕೇಳಿದ್ದಾರೆ, ನಾನಲ್ಲ'' ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಸಚಿವ ಶಿವರಾಜ ತಂಗಡಗಿ ಹೇಳಿಕೆ (ETV Bharat)

ಹರಿಯುವ ನೀರಿನಲ್ಲಿ ಗೇಟ್ ಅಳವಡಿಕೆ ಮಾಡೋದು ಮೊದಲ ಪ್ರಯತ್ನ:''ತುಂಗಭದ್ರಾ ಜಲಾಶಯ ಕಿತ್ತು ಹೋಗಿದ್ದ 19ನೇ ಕ್ರಸ್ಟ್‌ ಗೇಟ್​ಗೆ ಈಗಾಗಲೇ ಒಂದು ಎಲಿಮೆಂಟ್ ಜೋಡಿಸಲಾಗಿದೆ. ಹರಿಯುವ ನೀರಿನಲ್ಲಿ ಗೇಟ್ ಅಳವಡಿಕೆ ಮಾಡಿರುವುದು ಇದು ಇತಿಹಾಸದಲ್ಲೇ ಮೊದಲ ಪ್ರಯತ್ನವಾಗಿದೆ'' ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

''ಎಲ್ಲರ ಪ್ರಯತ್ನದಿಂದ ಮೊದಲ ಒಂದು ಗೇಟ್​ನ ಭಾಗವನ್ನು ಅಳವಡಿಕೆ ಮಾಡಲಾಗಿದೆ. ಇನ್ನೂ ನಾಲ್ಕು ಗೇಟ್​ಗಳ ಭಾಗಗಳು ರೆಡಿ ಆಗಿವೆ. ಅವುಗಳನ್ನು ಇವತ್ತು ಸಾಧ್ಯವಾದಷ್ಟು ಅಳವಡಿಸುತ್ತೇವೆ. ಇವತ್ತು ಬೆಳಗ್ಗೆಯಿಂದ ಜಲಾಶಯದ ಒಳಹರಿವು ಕೂಡಾ ಹೆಚ್ಚಾಗಿದೆ. ಸುಮಾರು 70 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದೆ. ಹೀಗಾಗಿ ಹೊರಹರಿವು ಕೂಡ ಹೆಚ್ಚು ಮಾಡಲಾಗುತ್ತಿದೆ. ಇದರಿಂದ ಉಳಿದ ಗೇಟ್​ಗಳಿಗೆ ಯಾವುದೇ ತೊಂದರೆ ಆಗಲ್ಲ'' ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಇದನ್ನೂ ಓದಿ:ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ: ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದ ಸಿಎಂ ಸಿದ್ದರಾಮಯ್ಯ - CM SIDDARAMAIAH

ABOUT THE AUTHOR

...view details