ಬೆಂಗಳೂರು:ಸತತ ಮಳೆ ಬೆಂಗಳೂರಿನಲ್ಲಿ ದಿನನಿತ್ಯದ ಗೋಳಾಗಿದೆ. ರಾಜ್ಯ ಸರ್ಕಾರ ಸಮಸ್ಯೆ ಇರುವ ಕಡೆ ತಕ್ಷಣದ ಕ್ರಮಕ್ಕೆ ಹಣ ಬಿಡುಗಡೆ ಮಾಡಬೇಕು. ಬೆಂಗಳೂರಿಗೆ ಒಂದು ಸಾವಿರ ಕೋಟಿ ಹಣವನ್ನು ಕೂಡಲೆ ಬಿಡುಗಡೆ ಮಾಡಿ. ಸರ್ಕಾರದ ಖಜಾನೆ ಖಾಲಿಯಾಗಿದ್ದರೆ ಐನೂರು ಕೋಟಿಯಾದರೂ ಬಿಡುಗಡೆ ಮಾಡಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.
ಸಿಲ್ಕ್ಬೋರ್ಡ್, ಹೆಚ್ಎರ್ಆರ್ ಬಡಾವಣೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಸಾರ್ವಜನಿಕರ ಅಹವಾಲು ಕೇಳಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಸಿಲ್ಕ್ಬೋರ್ಡ್ ಜಂಕ್ಷನ್ನಲ್ಲಿ ಪರಿಶೀಲನೆ ನಡೆಸಿದ್ದೇವೆ. ಒಂದೂವರೆ ವರ್ಷದಿಂದ ಇಲ್ಲಿ ಕಟ್ಟಡದ ಅವಶೇಷಗಳನ್ನು ತೆರವು ಮಾಡಿಲ್ಲ. ಇದು ಮುಳುಗುತ್ತಿರುವ ಬೆಂಗಳೂರು ಅಲ್ಲ, ತೇಲುತ್ತಿರುವ ಬೆಂಗಳೂರು ಎಂದು ಲೇವಡಿ ಮಾಡಿದರು.
ಹಾನಿಗೊಳಗಾದ ಪ್ರದೇಶ ಪರಿಶೀಲಿಸಿದ ಆರ್.ಅಶೋಕ್ (ETV Bharat) ಡಿಸಿಎಂ ಒಂದೂವರೆ ವರ್ಷಗಳಲ್ಲಿ ಎಷ್ಟು ರಾಜಕಾಲುವೆ ತೆರವುಗೊಳಿಸಿದ್ದಾರೆ?. ಕೇವಲ ಬೆಂಗಳೂರು ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಬೆಳೆ ಹಾನಿಯಾಗಿದೆ. ಕೂಡಲೇ ಸಿಎಂ ನಿದ್ದೆ ಮಾಡುವುದನ್ನು ಬಿಟ್ಟು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆದು ವಿವರ ಕೇಳಬೇಕು. ಈವರೆಗೂ ಸಿಎಂ ಯಾವುದೇ ಸಭೆ ಮಾಡಿಲ್ಲ ಎಂದು ದೂರಿದರು.
ಎರಡ್ಮೂರು ವರ್ಷವಾದ ಮೇಲೆ ಬಿಲ್ ಆಗುವ ಕಾರಣಕ್ಕೆ ಯಾವ ಕಾಂಟ್ರಾಕ್ಟರ್ಗಳೂ ಕೆಲಸ ಮಾಡಲು ತಯಾರಿಲ್ಲ. ರಾಜಕಾಲುವೆಗಳು ಕೊಳೆತು ನಾರುತ್ತಿವೆ. ಅಧಿಕಾರಿಗಳನ್ನು ಕೇಳಿದರೆ ಕೆಲಸ ಮಾಡುತ್ತೇವೆ ಸಾರ್ ಅಂತಾರೆ. ಮಾನ್ಯತಾ ಟೆಕ್ ಪಾರ್ಕ್ ಅಂದರೆ ಮುಳುಗಡೆ ಪಾರ್ಕ್ ಅಂತಾ ಬ್ರ್ಯಾಂಡ್ ಆಗಿದೆ. ಇಷ್ಟಾದರೂ ಯಾವುದೇ ಮಂತ್ರಿ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ. ಪ್ರತಿ ಹದಿನೈದು ದಿನಕ್ಕೊಮ್ಮೆ ಬೆಂಗಳೂರು ರೌಂಡ್ಸ್ ಮಾಡುತ್ತೇನೆ ಅಂತಾ ಹೇಳಿದ್ದಷ್ಟೇ. ಡಿಸಿಎಂ ನೈಟ್ ರೌಂಡ್ ಮಾಡಿದರೂ ಕತ್ತಲಲ್ಲಿ ಗ್ಲಾಸ್ ಹಾಕಿಕೊಂಡು ರೌಂಡ್ ಹಾಕಿದರೆ ಏನು ಕಾಣುತ್ತದೆ? ಎಂದು ಟೀಕಿಸಿದರು.
ಹಾನಿಗೊಳಗಾದ ಪ್ರದೇಶ ಪರಿಶೀಲಿಸಿದ ಆರ್.ಅಶೋಕ್ (ETV Bharat) ಸರ್ಕಾರ ಹಗರಣದ ರಾಜಕಾಲುವೆಯಲ್ಲಿ ಸಿಲುಕಿ ಒದ್ದಾಡುತ್ತಿದೆ. ಮೀಸಲಾತಿ ವಿಚಾರವಾಗಿ ಸಿಎಂ ಭೇಟಿಗೆ ಸಮಯ ಕೇಳಿದರೂ ಇನ್ನೂ ಕೊಟ್ಟಿಲ್ಲ. ದೆಹಲಿ ನಾಯಕರನ್ನು ಸಮಾಧಾನ ಮಾಡುವುದರಲ್ಲೇ ಅವರು ಬ್ಯುಸಿ ಆಗಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಮಳೆ ಹಾನಿ ಸಂಬಂಧ ಪರಿಹಾರ ಕಾರ್ಯಕ್ಕೆ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕು. ಬೆಂಗಳೂರಿನ ಎಲ್ಲಾ ಸಂಸ್ಥೆಗಳ ಸಭೆಯನ್ನು ಸಿಎಂ ಕರೆಯಬೇಕು ಎಂದರು.
ಇದನ್ನೂ ಓದಿ:ದಾವಣಗೆರೆಯಲ್ಲಿ ತಡರಾತ್ರಿ ಭಾರಿ ಮಳೆ: ಮನೆ, ರಸ್ತೆ, ತೋಟಗಳು ಜಲಾವೃತ