ಮೈಸೂರು :ಸುಮಾರು 2 ಶತಮಾನಗಳ ಹಳೆಯ ಪರಂಪರೆ ಹೊಂದಿರುವ ವೆಲ್ಲಿಂಗ್ಟನ್ ಭವನ ಶಿಥಿಲಾವಸ್ಥೆಯಲ್ಲಿದ್ದರಿಂದ ಇದನ್ನು ನವೀಕರಣಗೊಳಿಸಿ, ಇಲ್ಲಿದ್ದ ಸಾಂಪ್ರದಾಯಿಕ ಶೈಲಿಯ ರಾಮಾಯಣ ಮಹಾಕಾವ್ಯದ ಸಮಗ್ರ ಕಲಾಕೃತಿ ಹಾಗೂ ರಾಜ ಪರಂಪರೆಯ ಅಪರೂಪದ ಕಲಾಕೃತಿಗಳ ಗ್ಯಾಲರಿಗಳಿಗೆ ಜೀವ ತುಂಬಲಾಗಿದೆ. ಈ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ.
ಮೈಸೂರು ನಗರದ ಇರ್ವಿನ್ ರಸ್ತೆಯಲ್ಲಿರುವ ಸರ್ಕಾರಿ ವಸ್ತುಸಂಗ್ರಹಾಲಯವಾದ ವೆಲ್ಲಿಂಗ್ಟನ್ ಕಟ್ಟಡವನ್ನ ಪುರಾತತ್ವ ಇಲಾಖೆ ಸುಮಾರು 80 ಲಕ್ಷ ವೆಚ್ಚದಲ್ಲಿ ನವೀಕರಣ ಮಾಡಿದ್ದರೆ, ಒಳಗಿದ್ದ ಕಲಾ ಗ್ಯಾಲರಿಯ ಕಲಾಕೃತಿಗಳನ್ನ ಸುಮಾರು 19 ಲಕ್ಷದಲ್ಲಿ ನವೀಕರಣ ಮಾಡಿದ್ದಾರೆ. ನವೀಕರಣಗೊಂಡ ಕಟ್ಟಡವನ್ನು ಪ್ರವಾಸಿಗರಿಗೆ ಜನವರಿ 31ರಂದು ಮುಕ್ತಗೊಳಿಸಲಾಯಿತು.
ಪುರಾತತ್ವ ಇಲಾಖೆಯ ಆಯುಕ್ತ ದೇವರಾಜು ಹಾಗೂ ಕಲಾ ಗ್ಯಾಲರಿ ವಿನ್ಯಾಸಕ ಗಿರೀಶ್ ಮಾತನಾಡಿದರು (ETV Bharat) ಈ ವೆಲ್ಲಿಂಗ್ಟನ್ ಭವನ ಬ್ರಿಟಿಷರ ಆಡಳಿತ ಕಾಲದಲ್ಲಿ ವಸತಿ ಗೃಹವಾಗಿತ್ತು. ಬಳಿಕ ಮೈಸೂರಿನ ರಾಜವಂಶಸ್ಥ ಮೂರನೇ ಕೃಷ್ಣರಾಜ ಒಡೆಯರ್ ಕಾಲದಲ್ಲಿ ರಾಜತಾಂತ್ರಿಕ ಒಪ್ಪಂದ ಪ್ರಕಾರ ವೆಲ್ಲಿಂಗ್ಟನ್ ಭವನ ಮೈಸೂರಿನ ರಾಜವಂಶಸ್ಥರಿಗೆ ಬಂತು.
ಇಲ್ಲಿಯ ಕಲಾ ಗ್ಯಾಲರಿಯ ವಿಶೇಷತೆಗಳು ಏನು?ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಸಾಂಪ್ರದಾಯಿಕ ಶೈಲಿಯ ರಾಮಾಯಣ ಮಹಾಕಾವ್ಯದ ಸಮಗ್ರ ಕಲಾಕೃತಿ ಹಾಗೂ ರಾಜ ಪರಂಪರೆಯ ಆಸ್ಥಾನದ ಕಲಾವಿದರ ಭಾವಚಿತ್ರಗಳು ಆಕರ್ಷಣೀಯವಾಗಿವೆ. ಮುಖ್ಯವಾಗಿ ಕಲಾವಿದರಾದ ಕೆ. ಕೆ ಹೆಬ್ಬಾರ್ ಸಂಗ್ರಹಿಸಿದ ಕಲಾಕೃತಿಗಳು ಗಮನ ಸೆಳೆಯುತ್ತಿವೆ.
ಸಾಂಪ್ರದಾಯಿಕ ಶೈಲಿಯ ರಾಮಾಯಣ ಮಹಾಕಾವ್ಯದ ಸಮಗ್ರ ಕಲಾಕೃತಿ (ETV Bharat) ಈ ಕಲಾ ಗ್ಯಾಲರಿಯಲ್ಲಿ ಸಂಗ್ರಹಿಸಲ್ಪಟ್ಟ ಕಲಾಕೃತಿಗಳನ್ನ ಆರು ವಿಭಾಗವಾಗಿ ವಿಂಗಡಿಸಿ ಪ್ರದರ್ಶನಕ್ಕೆ ಇಡಲಾಗಿದೆ. ಅದರಲ್ಲಿ ಭಾರತೀಯ ಚಿಕ್ಕಣಿ ಚಿತ್ರಕಲೆ, ಗಜಿಂಪ್ಪ ಕಲೆ, ಮೈಸೂರು ಸಾಂಪ್ರದಾಯಿಕ ಚಿತ್ರಕಲೆ, ತಂಜಾವೂರು ಸಾಂಪ್ರದಾಯಿಕ ಚಿತ್ರಕಲೆ, ಭಾರತೀಯ ಸಮಕಾಲೀನ ಚಿತ್ರಕಲೆ ಹಾಗೂ ಮೈಸೂರು ರಾಜಮನೆತನದ ಪರಂಪರೆ ಹಾಗೂ ಆಸ್ಥಾನ ಕಲಾವಿದರ ಭಾವಚಿತ್ರಗಳು ಎಂಬ ಆರು ಪ್ರಕಾರದ ಕಲಾಪ್ರದರ್ಶನಗಳನ್ನ ಕಲಾ ಗ್ಯಾಲರಿಯಲ್ಲಿ ಇಡಲಾಗಿದೆ. ಒಟ್ಟು 101 ಕಲಾಕೃತಿಗಳಿವೆ ಎಂದು ಪುರಾತತ್ವ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.
ವೆಲ್ಲಿಂಗ್ಟನ್ ಭವನದಲ್ಲಿ ಕಂಡುಬಂದ ಚಿತ್ರಕಲಾಕೃತಿ (ETV Bharat) ವೆಲ್ಲಿಂಗ್ಟನ್ ಭವನದ ಮುಂದೆ ಮೂರ್ತಿಗಳ ಆಕರ್ಷಣೆ : ವಸ್ತುಸಂಗ್ರಹಾಲಯದ ಮುಂಭಾಗದಲ್ಲಿರುವ ಉದ್ಯಾನವನದಲ್ಲಿ ಗಂಗರ ಕಾಲದಿಂದ ವಿಜಯನಗರ ಕಾಲದವರೆಗಿನ ಶಿಲಾ ಶಿಲ್ಪಗಳಿವೆ. ಅವುಗಳಲ್ಲಿ ಮಹಿಷಾಮರ್ಧಿನಿ, ವಿಷ್ಣು , ಭೈರವಿ, ಕಾಳಿ, ಸತಿಶಿಲ್ಪ, ವೀರಕಲ್ಲು, ತೀರ್ಥಂಕರರು, ಪಾರ್ಶ್ವನಾಥ ಹಾಗೂ ಮೈಸೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಗ್ರಹಿಸಿದ ಶಿಲ್ಪಕಲಾ ಮೂರ್ತಿಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ವೆಲ್ಲಿಂಗ್ಟನ್ ಭವನದಲ್ಲಿರುವ ಕಲಾಕೃತಿಗಳು (ETV Bharat) ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಕಮಿಷನರ್ ದೇವರಾಜು ಹೇಳಿದ್ದೇನು? : ಈ ಕಟ್ಟಡ 1977ರಲ್ಲಿ ಲಾರ್ಡ್ ವೆಲ್ಲೆಸ್ಲಿ ಅವರ ವಾಸ ಸ್ಥಾನವಾಗಿತ್ತು. ಸುಮಾರು 200 ವರ್ಷಗಳ ಇತಿಹಾಸ ಇರುವ ಈ ಕಟ್ಟಡವನ್ನು ಸುಮಾರು 80 ಲಕ್ಷ ರೂ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ ಎಂದಿದ್ದಾರೆ.
ರಾಜರ ಆಸ್ಥಾನದಲ್ಲಿದ್ದ ಕಲಾವಿದರ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಭಾರತೀಯ ಸಮಕಾಲಿನ ಕಲಾವಿದರಾದ ಎಂ. ಎಫ್ ಹುಸೇನ್, ಎಸ್. ಜಿ ವಾಸುದೇವ್, ಚಂದ್ರನಾಥ ಆಚಾರ್ಯ, ಜಿ. ಎಂ. ಎಸ್ ಮಣಿ, ಬೆನ್‌ಗುಪ್ತಾ, ಜಿ. ಎಸ್ ಶೆಣೈ ಅವರ ಕಲಾಕೃತಿಗಳನ್ನು ಇಡಲಾಗಿದೆ ಎಂದು ತಿಳಿಸಿದರು.
ವೆಲ್ಲಿಂಗ್ಟನ್ ಕಟ್ಟಡದಲ್ಲಿರುವ ಪೈಂಟಿಂಗ್ (ETV Bharat) ಇಲ್ಲಿ ಎಂಟು ಗ್ಯಾಲರಿಗಳನ್ನು ನಿರ್ಮಾಣ ಮಾಡಿ ಪ್ರತಿ ಗ್ಯಾಲರಿಗಳಲ್ಲಿ ವೈವಿಧ್ಯಮಯ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ವಿಶೇಷವಾಗಿ ಅಂದಿನ ಮೈಸೂರು ಆಸ್ಥಾನದ ಕಲಾವಿದರ ಕಲಾಕೃತಿಗಳನ್ನು ಹೆಚ್ಚು ಇಡಲಾಗಿದೆ. ಎಲ್ಲಾ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಇಲ್ಲಿನ ಕಲಾಕೃತಿಗಳನ್ನು ವೀಕ್ಷಣೆ ಪಡೆದು ಮೈಸೂರಿನ ಭವ್ಯ ಪರಂಪರೆ ಮತ್ತು ಕಲಾವಿದರ ಕೈಚಳಕದ ಬಗ್ಗೆ ತಿಳಿದುಕೊಳ್ಳಬೇಕು. ಇದರಲ್ಲಿ ವಿಶೇಷವಾಗಿ ಸಂಪೂರ್ಣ ರಾಮಾಯಣವನ್ನು ಚಿತ್ರಿಸಲಾಗಿದ್ದು, ಅದು ಬಹಳ ವಿಶೇಷವಾಗಿದೆ ಎಂದರು.
ಕಲಾ ಗ್ಯಾಲರಿ ವಿನ್ಯಾಸ ಮಾಡಿದ ಎಂ. ಗಿರೀಶ್ ಕೋಟಿ ಹೇಳಿದ್ದೇನು?ಈ ಕಲಾ ಗ್ಯಾಲರಿಯನ್ನು ಮೈಸೂರಿನ ಐತಿಹಾಸಿಕ ಕಟ್ಟಡದ ಒಳಗೆ ನಿರ್ಮಾಣ ಮಾಡಿದ್ದೇವೆ. ಇಲ್ಲಿ ಸಾಕಷ್ಟು ವಿಶೇಷತೆಗಳಿಂದ ಕೂಡಿದ ಕಲಾಕೃತಿಗಳಿವೆ. ಅದರಲ್ಲಿ ಸಂಪೂರ್ಣ ರಾಮಾಯಣದ ಕಲಾಕೃತಿಗಳು ಬಹಳ ವಿಶೇಷವಾಗಿವೆ. ಕಲಾವಿದ ಸಂಪೂರ್ಣ ರಾಮಾಯಣವನ್ನು ತನ್ನ ಚಿತ್ರಕಲೆಯ ಮೂಲಕ ಬಹಳ ಸುಂದರವಾಗಿ ನಿರ್ಮಿಸಿದ್ದಾನೆ ಎಂದಿದ್ದಾರೆ.
ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಕಂಡುಬಂದ ರಾಜಪರಂಪರೆಯ ಕಲಾಕೃತಿ (ETV Bharat) ವಿಜಯನಗರದ ಪತನದ ಬಳಿಕ ಅಲ್ಲಿದ್ದ ಅನೇಕ ಕಲಾವಿದರು ಮೈಸೂರಿನ ಆಸ್ಥಾನಕ್ಕೆ ಬರುತ್ತಾರೆ. ಮೈಸೂರಿನ ಮಹಾರಾಜರು ಅವರಿಗೆ ತಮ್ಮ ಆಸ್ಥಾನದಲ್ಲಿ ಆಶ್ರಯ ನೀಡಿ ಅವರ ಕಲೆಯನ್ನು ಗೌರವಿಸಿದರು. ಹೀಗಾಗಿ ಮೈಸೂರಿನಲ್ಲಿ ಸಾಂಪ್ರದಾಯಿಕ ಕಲಾಕೃತಿಯು ಅದ್ಭುತವಾಗಿ ಬೆಳೆದು ಬಂದಿದೆ. 120 ವರ್ಷದ ಹಳೆಯ ಕಲಾಕೃತಿಗಳನ್ನು ಇಲ್ಲಿ ಇರಿಸಲಾಗಿದೆ. ಹಿಂದಿನ ಕಾಲದಲ್ಲಿ ಚಿತ್ರಗಳ ರೂಪದಲ್ಲಿ ಐತಿಹಾಸಿಕ ಮತ್ತು ಪೌರಾಣಿಕ ಕಥೆಗಳನ್ನು ಹೇಳುತ್ತಿದ್ದರು ಎಂದು ತಿಳಿಸಿದ್ದಾರೆ.
ವೆಲ್ಲಿಂಗ್ಟನ್ ಸರ್ಕಾರಿ ವಸ್ತು ಸಂಗ್ರಹಾಲಯ ಮತ್ತು ಕಲಾ ಗ್ಯಾಲರಿಯ ಟಿಕೆಟ್ ಕೌಂಟರ್ (ETV Bharat) ಕರ್ನಾಟಕದಲ್ಲಿ ಇಷ್ಟು ಅದ್ಭುತವಾದ ಕಲಾ ಗ್ಯಾಲರಿ ಮತ್ತೊಂದಿಲ್ಲ. ಒಂದೊಂದು ಕೊಠಡಿಯಲ್ಲಿ ವಿಭಿನ್ನ ರೀತಿಯ ಕಲಾಚಿತ್ರಗಳನ್ನು ಇರಿಸಲಾಗಿದೆ. ಮೈಸೂರು ರಾಜರ ಪರಂಪರೆಯನ್ನ ಸಾರುವ ಅನೇಕ ಕಲಾಚಿತ್ರಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ನಮ್ಮ ಕಲಾ ಗ್ಯಾಲರಿಗೆ ಸಾರ್ವಜನಿಕರು ಯಾವಾಗ ಬೇಕಾದರೂ ಬರಬಹುದು. ಬೆಳಗ್ಗೆ 11 ರಿಂದ ಸಂಜೆ 7 ಗಂಟೆವರೆಗೆ ಪ್ರದರ್ಶನಕ್ಕೆ ಅನುಕೂಲ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ :ಸಿಮೆಂಟ್ ಶಿಲ್ಪ ಕಲೆಗೆ ಹೆಸರುವಾಸಿವಾದ ಗೋಟಗೊಡಿಯ ಕಲಾ ಕುಟೀರ ; ಇಲ್ಲಿವೆ ರಿಯಾಲಿಸ್ಟಿಕ್ ಕಲಾಕೃತಿಗಳು - GOTAGODI KALA KUTIRA