ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) 928 ಬಸ್‌ಗಳಲ್ಲಿ ವಿಕಲಚೇತನರು ಮತ್ತು ದೃಷ್ಟಿದೋಷವುಳ್ಳವರ ಸಹಾಯಕ್ಕಾಗಿ ಧ್ವನಿ ಪ್ರಕಟಣೆ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ರಾಜ್ಯ ಮತ್ತು ಮಹಾನಗರ ಸಾರಿಗೆ ಸಂಸ್ಥೆಯ ಬಸ್‌ಗಳು ಮತ್ತು ಮೆಟ್ರೋ ರೈಲುಗಳಲ್ಲಿ ಧ್ವನಿ ಪ್ರಕಟಣೆ ಸೇವೆಯನ್ನು ಪುನರಾರಂಭಿಸುವಂತೆ ಕೋರಿ ದೃಷ್ಟಿದೋಷವುಳ್ಳ ಎನ್.ಶ್ರೇಯಸ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ನ್ಯಾಯಪೀಠಕ್ಕೆ ಬಿಎಂಟಿಸಿ ಪರ ವಕೀಲರು ಈ ಬಗ್ಗೆ ಮಾಹಿತಿ ನೀಡಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ, ''ಅರ್ಜಿದಾರರ ಮನವಿ ಈಡೇರಿದೆ. ನ್ಯಾಯಾಲಯದ ಎಲ್ಲ ನಿರ್ದೇಶನಗಳನ್ನು ಸಾರಿಗೆ ಸಂಸ್ಥೆ ಜಾರಿ ಮಾಡಿದೆ'' ಎಂದು ತಿಳಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತು.
ಅರ್ಜಿದಾರಿಂದಲೇ ವಾದ ಮಂಡನೆ:ವಿಚಾರಣೆ ವೇಳೆ ಖುದ್ದು ವಾದ ಮಂಡಿಸಿದ್ದ ಅರ್ಜಿದಾರ ಶ್ರೇಯಸ್, ''ಪ್ರಾರಂಭಿಕ ಹಂತದಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು ಮತ್ತು ಮೆಟ್ರೋ ರೈಲಿನಲ್ಲಿ ದ್ವನಿಯ ಮೂಲಕ ವಿವರಣೆ ನೀಡಲಾಗುತ್ತಿತ್ತು. ಇದರಿಂದ ದೃಷ್ಟಿ ದೋಷವುಳ್ಳವರಿಗೆ ಇಳಿಯವ ಸ್ಥಳ ಮತ್ತು ಬಸ್ ನಿಲ್ದಾಣಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತಿತ್ತು. ಆದರೆ, ಕೆಲ ದಿನಗಳ ಹಿಂದೆ ಈ ವ್ಯವಸ್ಥೆಯನ್ನು ಹಠಾತ್ ಸ್ಥಗಿತಗೊಳಿಸಲಾಗಿತ್ತು. ಇದರಿಂದ ದೃಷ್ಟದೋಷವುಳ್ಳವರಿಗೆ ತೀವ್ರತರದ ತೊಂದರೆ ಅನುಭವಿಸುವಂತಾಗಿದೆ'' ಎಂದು ತಿಳಿಸಿದರು.
ನಿಗದಿತ ಸ್ಥಳ ತಲುಪಲು ಕಷ್ಟಸಾಧ್ಯವಾಗಲಿದೆ: ''ಹೀಗಾಗಿ ದೃಷ್ಟಿದೋಷವುಳ್ಳವವರಿಗೆ ಯಾವುದೇ ವಿಶೇಷ ಸೌಲಭ್ಯವನ್ನು ಕಲ್ಪಿಸುವ ಬದಲಾಗಿ ಸಾರಿಗೆ ಬಸ್‌ಗಳಲ್ಲಿ ಧ್ವನಿ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಜನ ದಟ್ಟಣೆ ಸಂದರ್ಭದಲ್ಲಿ ನೆರವಾಗಲಿದೆ. ಜೊತೆಗೆ, ಸಾಮಾನ್ಯ ಸಂದರ್ಭಗಳಲ್ಲಿ ಬಸ್ ನಿರ್ವಾಹಕರು ಅಂಗವಿಕಲರಿಗೆ ನೆರವಾಗುತ್ತಾರೆ. ಆದರೆ, ಜನದಟ್ಟಣೆ ಇದ್ದಾಗ ದೃಷ್ಟಿದೋಷವುಳ್ಳವರ ಕುರಿತು ಗಮನ ಹರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಇದರಿಂದ ಅಂಗವಿಕಲರು ಮತ್ತು ದೃಷ್ಟಿ ದೋಷವುಳ್ಳವರು ಹೋಗಬೇಕಾದ ಸ್ಥಳ ತಲುಪುಲು ಕಷ್ಟಸಾಧ್ಯವಾಗಲಿದೆ'' ಎಂದು ವಾದಿಸಿದ್ದರು.
''ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿನ ಎಲ್ಲ ಪ್ರಮುಖ ಸಾರಿಗೆ ವಿಧಾನಗಳಾದ ಮೆಟ್ರೋ ಮಾರ್ಗ ಮತ್ತು ನಗರ ಸಾರಿಗೆ ಬಸ್‌ಗಳು ಮತ್ತು ರಾಜ್ಯ ಸಾರಿಗೆ ಬಸ್‌ಗಳ ಧ್ವನಿ ಮಾಹಿತಿ ಸೌಲಭ್ಯ ಒದಗಿಸಲಾಗಿದೆ. ಅಲ್ಲದೆ, ಓಲಾ, ಉಬರ್ನಂತಹ ಖಾಸಗಿ ಸೇವೆಗಳಲ್ಲಿಯೂ ಗೂಗಲ್ ನಕ್ಷೆಗಳ ಸೌಲಭ್ಯವು ಪ್ರಯಾಣಿಕರು ಮತ್ತು ವಾಹನ ಚಾಲಕರಿಗೆ ಲಭ್ಯವಿರಲಿದೆ. ಈ ರೀತಿಯಲ್ಲಿ ಸೇವೆಯಲ್ಲಿ ಪ್ರಯಾಣಿಸುವವರು ಅಗತ್ಯ ಮಾಹಿತಿ ಪಡೆದು ಚಾಲಕರಿಗೆ ವಿವರಿಸಲಿದ್ದು, ಅಂಗವಿಕಲರು ಮತ್ತು ದೃಷ್ಟಿದೋಷವುಳ್ಳವರ ಸುಗಮ ಸಂಚಾರ ವ್ಯವಸ್ಥೆಗೆ ನೆರವಾಗಲಿದೆ'' ಎಂದು ಪೀಠಕ್ಕೆ ಶ್ರೇಯಸ್ ವಿವರಿಸಿದರು.
ಇದನ್ನೂ ಓದಿ:ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕೊಲೆ ಕೇಸ್: ಸಿಬಿಐ ತನಿಖೆಗೆ ಪತ್ನಿ ಅರ್ಜಿ, ಆದೇಶ ಕಾಯ್ದಿರಿಸಿದ ಹೈಕೋರ್ಟ್