ಬೆಂಗಳೂರು: ಅನುತ್ತೀರ್ಣರಾದ ಹಾಗೂ ಉನ್ನತ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗಬಾರದೆಂಬ ಉದ್ದೇಶದಿಂದ ಇದೇ ಮೊದಲ ಬಾರಿಗೆ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ಮಾದರಿಯಲ್ಲಿ ಮೂರು ಬಾರಿ ಪೂರಕ ಪರೀಕ್ಷೆ ನಡೆಸಲಾಗುತ್ತಿದೆ. ಮೊದಲ ಪೂರಕ ಪರೀಕ್ಷೆಯು ದ್ವಿತೀಯ ಪಿಯುಸಿಗೆ ಮಾರ್ಚ್ 1ರಿಂದ 22ವರೆಗೆ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯು ಮಾರ್ಚ್ 25 ರಿಂದ ಏಪ್ರಿಲ್ 4ರ ವರೆಗೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನ ಉನ್ನತ ಶಿಕ್ಷಣದತ್ತ ಕೊಂಡೊಯ್ಯಲು ಹಾಗೂ ಸಾಕ್ಷರತಾ ಪ್ರಮಾಣ ಅಧಿಕಗೊಳಿಸಲು ರಾಜ್ಯದಲ್ಲಿ ಮೊದಲ ಬಾರಿಗೆ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯನ್ನು ಮೂರು ಬಾರಿ ನಡೆಸಲಾಗುತ್ತಿದೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿಗೆ ಎರಡನೇ ಪೂರಕ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆಗೆ ಹಾಜರಾದ 1,19,183 ವಿದ್ಯಾರ್ಥಿಗಳ ಪೈಕಿ 41,961 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದರು.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಅಂತಿಮ ಪರೀಕ್ಷೆ ಮಾದರಿಯಲ್ಲಿ ಮೂರು ಬಾರಿ ಪರೀಕ್ಷೆ ನಡೆಸಲಾಗುತ್ತಿದೆ. ದ್ವಿತೀಯ ಪಿಯುಸಿ ಪರೀಕ್ಷೆಗೆ 6,98,624 ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಗೆ 8,96,171 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಯು 1284 ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯು 2747 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಹೆಚ್ಚು ಅಂಕ ಗಳಿಸಿರುವುದು ಪರಿಗಣನೆಗೆ: ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪರೀಕ್ಷೆ-1ರ ಸಂಬಂಧ ಜಿಲ್ಲಾ ಹಂತದ ಅಧಿಕಾರಿಗಳ ಸಭೆಗಳನ್ನು ನಡೆಸಲಾಗಿದೆ. ಎಲ್ಲಾ ರೀತಿ ತಯಾರಿ ಮಾಡಿಕೊಳ್ಳಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ-2ನ್ನ ಏಪ್ರಿಲ್ ಕೊನೆಯ ವಾರದಲ್ಲಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆ-2 ಮೇ ಮೂರನೇ ವಾರದಲ್ಲಿ ನಡೆಯಲಿದೆ. ಅನುತ್ತೀರ್ಣಗೊಂಡವರು ಮೂರು ಬಾರಿ ಪೂರಕ ಪರೀಕ್ಷೆಗಳನ್ನು ಬರೆಯಬಹುದಾಗಿದೆ. ಉತ್ತೀರ್ಣಗೊಂಡವರು ಸಹ ಇನ್ನಷ್ಟು ಹೆಚ್ಚು ಗಳಿಕೆಗೆ ಮತ್ತೆ ಪರೀಕ್ಷೆ ಬರೆಯಬಹುದಾಗಿದೆ. ಪರೀಕ್ಷೆ ಬರೆದ ಮೂರು ಬಾರಿಯಲ್ಲಿ ಹೆಚ್ಚು ಗಳಿಸಿರುವುದನ್ನು ಮಾತ್ರ ಪರಿಗಣಿಸಲಾಗುವುದು. ಅಲ್ಲದೆ ಪೂರಕ ಪರೀಕ್ಷೆ ಬರೆಯುವವರು ನೋಂದಣಿ ಮಾಡಿಕೊಳ್ಳಬೇಕಿದೆ. ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮೂರು ಬಾರಿ ಪರೀಕ್ಷೆ ನಡೆಸಲಾಗುತ್ತದೆ ಎಂದಿದ್ದಾರೆ.
ವಿಷಯವಾರು ಪರೀಕ್ಷೆ ಬರೆಯಬಹುದು: ಮೊದಲ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಪಾಸಾಗಿ ಒಂದು ವಿಷಯದಲ್ಲಿ ಪರೀಕ್ಷೆ ಬರೆಯಬಹುದಾಗಿದೆ. ಅಲ್ಲದೆ ಪಾಸಾಗಿ ಕಡಿಮೆ ಅಂಕ ಬಂದ ವಿದ್ಯಾರ್ಥಿಯು ತೃಪ್ತಿಕರನಾಗದಿದ್ದರೆ, ನೋಂದಾಯಿಸಿ ಪರೀಕ್ಷೆ ಬರೆಯಬಹುದಾಗಿದೆ. ಪರೀಕ್ಷೆಯಲ್ಲಿ ಉತ್ತೀರ್ಣಗೊಂಡವರು ತುರ್ತು ಅಗತ್ಯವಿದ್ದಲ್ಲಿ ಮಾರ್ಕ್ಸ್ ಕಾರ್ಡ್ನ್ನು ಡಿಜಿಲಾಕರ್ ಮೂಲಕ ಪಡೆಯಬಹುದಾಗಿದೆ ಎಂದರು.
ಪರೀಕ್ಷೆ ಬರೆಯುವವರು ಆಯಾ ಶಾಲಾ-ಕಾಲೇಜುಗಳಲ್ಲಿ ವಿಧಿಸಿರುವ ನಿಯಮದಡಿ ಸಮವಸ್ತ್ರ ಧರಿಸಿ ಪರೀಕ್ಷೆ ಬರೆಯಬೇಕಿದೆ. ಹಿಜಾಬ್ ಧರಿಸುವ ಸಂಬಂಧ ಅಡ್ವೋಕೇಟ್ ಜನರಲ್ ಬಳಿ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ