ಮಂಗಳೂರು (ದಕ್ಷಿಣ ಕನ್ನಡ) : ತುಳುನಾಡಿನ ವಿಶೇಷ ಆಚರಣೆಯಲ್ಲಿ ಗೋಂದೋಳು ಪೂಜೆಯೂ ಒಂದು. ಮಹಾರಾಷ್ಟ್ರದಿಂದ ಕರಾವಳಿಗೆ ವಲಸೆ ಬಂದ ಮರಾಠಿ ನಾಯ್ಕ ಸಮಾಜ ಈ ಗೋಂದೋಳು ಪೂಜೆಯನ್ನು ನೆರವೇರಿಸುತ್ತಾರೆ. ಹೆಚ್ಚಾಗಿ ದೈವಾರಾಧನೆ ನಡೆಯುವ ಕಡೆಯಲ್ಲಿ ಈ ಗೋಂದೋಳು ಪೂಜೆ ನೆರವೇರುತ್ತಿದ್ದು, ಅಸುರ ಮತ್ತು ದೇವ ಕ್ರಿಯೆಯಲ್ಲಿ ಈ ಪೂಜೆ ನೆರವೇರುತ್ತದೆ.
ಶಿವಾಜಿ ಮಹಾರಾಜ್ ವಂಶಸ್ಥರಾದ ಮರಾಠಿ ನಾಯ್ಕ್ ಹಿಂದೆ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನಾಂಗವಾಗಿದೆ. ಜೀವನಕ್ಕಾಗಿ ಕೃಷಿ ಚಟುವಟಿಕೆಗಳಲ್ಲೂ ಈ ಸಮಾಜ ತನ್ನನ್ನು ತೊಡಗಿಸಿಕೊಂಡಿತ್ತು. ಭತ್ತದ ಬೇಸಾಯ ಸೇರಿದಂತೆ ವಿವಿಧ ಕೃಷಿ ಮಾಡುತ್ತಿದ್ದ ಸಂದರ್ಭದಲ್ಲಿ ಕೃಷಿಗೆ ಪ್ರಾಣಿಗಳ ಕಾಟ ಬಹಳಷ್ಟು ಕಾಡುತ್ತಿತ್ತು. ಈ ಸಂಕಷ್ಟದಿಂದ ಪಾರು ಮಾಡಲು ಭೈರವನ ಮತ್ತು ಮಹಾಮ್ಮಾಯಿ ದೇವಿಯ ಮೊರೆ ಹೋಗಿದ್ದರು. ಬೆಳೆಗೆ ತೊಂದರೆ ಕೊಡುತ್ತಿದ್ದ ಹಂದಿಗಳನ್ನು ಕೊಂದು ಅದನ್ನು ಅಡುಗೆ ಮಾಡಿ, ತಿನ್ನುವ ಮೊದಲು ಭೈರವನಿಗೆ ಮತ್ತು ದೇವಿಗೆ ಅರ್ಪಿಸುತ್ತಿದ್ದರು.
ಗೋಂದೋಳು ಪೂಜೆಯ ನರ್ತಕರು ವೃತ್ತಾಕಾರ ಮಾಡಿ, ಪ್ರದಕ್ಷಿಣೆ ಮತ್ತು ಅಪ್ರದಕ್ಷಿಣೆ ಮಾಡಿ ದೇವಿಯನ್ನು ವಿಶೇಷ ರೀತಿಯಲ್ಲಿ ಪ್ರಾರ್ಥಿಸುತ್ತಾರೆ. 9 ಸುತ್ತುಗಳ ಪ್ರದಕ್ಷಿಣೆ ಮತ್ತು ಅಪ್ರದಕ್ಷಿಣೆ ಸೇವೆ ನೆರವೇರಿಸಿ ಬಳಿಕ ದೇವಿಗೆ ಪೂಜೆ ನೆರವೇರಿಸಿ ಬಂದ ಭಕ್ತಾಧಿಗಳಿಗೆಲ್ಲಾ ಪ್ರಸಾದವನ್ನು ಹಂಚಲಾಗುತ್ತಿತ್ತು. ಈ ಸೇವೆ ನೆರವೇರಿಸಿದ ಬಳಿಕ ಕೃಷಿಗೆ ತೊಂದರೆ ಕೊಡುತ್ತಿದ್ದ ಪ್ರಾಣಿಗಳ ಸಮಸ್ಯೆ ಕಡಿಮೆಯಾಗಿತ್ತಂತೆ. ಅಲ್ಲದೇ ಈ ಪೂಜೆಯ ಸಂದರ್ಭದಲ್ಲಿ ದೇವಿಯ ಆಶೀರ್ವಾದ ಪಡೆದರೆ, ಕಾಲು ನೋವು, ಮಾರಿ ಸೇರಿದಂತೆ ಹಲವು ಸಮಸ್ಯೆಗಳು ದೂರವಾಗುತ್ತದೆ ಎನ್ನುವ ನಂಬಿಕೆಯೂ ಇದೆ.