ಗಂಗಾವತಿ: "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಮುಡಾದಲ್ಲಿ ಕೇವಲ ಹದಿನಾಲ್ಕು ಸೈಟುಗಳ ವಂಚನೆಯಲ್ಲ. ಅವರು ನಾಲ್ಕು ಸಾವಿರ ಕೋಟಿ ಮೊತ್ತದಷ್ಟು ವಂಚನೆ ಮಾಡಿದ್ದಾರೆ" ಎಂದು ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
ಈ ಬಗ್ಗೆ ಸೋಮವಾರ ನಗರಸಭೆಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, "ಸಿದ್ದರಾಮಯ್ಯ ಮೂಡಾದಲ್ಲಿ ಕೇವಲ ಹದಿನಾಲ್ಕು ಸೈಟಲ್ಲಿ ರಾಜ್ಯದ ಜನರಿಗೆ ವಂಚನೆ ಮಾಡಿಲ್ಲ. ತಮ್ಮ ಬಂಧು - ಬಳಗ, ಆಪ್ತರು, ಸ್ನೇಹಿತರ ಹೆಸರಲ್ಲಿ, ವ್ಯಕ್ತಿಗಳೇ ಇಲ್ಲದವರ ಹೆಸರಲ್ಲಿ, ಅನಾಮಧ್ಯೇಯರ ಹೆಸರಲ್ಲಿ ಒಟ್ಟು ನಾಲ್ಕು ಸಾವಿರ ಕೋಟಿ ಬೆಳೆ ಬಾಳುವ ಆಸ್ತಿ ಲೂಟಿ ಮಾಡಿ ಅಕ್ರಮ ಮಾಡಿದ್ದಾರೆ. ಸಿದ್ದರಾಮಯ್ಯ ಇಷ್ಟು ದಿನಗಳ ಕಾಲ ಜನರಿಗೆ ಮೋಸ ಮಾಡುತ್ತಲೇ ಬಂದಿದ್ದಾರೆ. ಆದರೆ, ಜನರಿಗೆ ಗೊತ್ತಾಗಿರಲಿಲ್ಲ. ಈಗಷ್ಟೇ ಒಂದೊಂದೇ ವಂಚನೆಗಳು ಬೆಳಕಿಗೆ ಬರುತ್ತಿವೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"2015ರಲ್ಲಿ ಜೈಲಿಂದ ಹೊರ ಬಂದ ತಕ್ಷಣ ನನ್ನ ಮೇಲೆ ಹೆಚ್ಚುವರಿ ಆಸ್ತಿಗಳಿಕೆ ಆರೋಪದಲ್ಲಿ ಪ್ರಕರಣ ದಾಖಲು ಮಾಡಿದ್ದರು. ಈ ಪ್ರಕರಣದಲ್ಲಿ ಸ್ವತಃ ಕಾಂಗ್ರೆಸ್ ಸರ್ಕಾರವೇ ಎರಡು ಬಾರಿ ಬಿ ರಿಪೋರ್ಟ್ ನೀಡಿದೆ. ನನ್ನ ಸಂಪಾದನೆ ಮತ್ತು ಆಸ್ತಿಗೆ ಹೋಲಿಸಿದರೆ 148 ಕೋಟಿ ಹೆಚ್ಚುವರಿ ಹಣ ನನ್ನ ಬಳಿ ಇದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಖಾತೆಗಳನ್ನು ಪರಿಶೀಲಿಸಿದ ಬಳಿಕ ಸ್ವತಃ ಲೋಕಾಯುಕ್ತರೇ ಮೂರು ಬಾರಿ ನ್ಯಾಯಾಲಯಕ್ಕೆ ನೋ ಅಬ್ಜೆಕ್ಷನ್ ಫೈಲ್ ಮಾಡಿದ್ಧಾರೆ. ಆದರೆ ಉದ್ದೇಶ ಪೂರ್ವಕ ನನ್ನನ್ನು ಸಿಲುಕಿಸಲು ಸಿದ್ದರಾಮಯ್ಯ ಅವರೇ ಷಡ್ಯಂತ್ರ ಹೆಣೆಯುತಿದ್ದಾರೆ" ಎಂದು ರೆಡ್ಡಿ ಆರೋಪಿಸಿದ್ದಾರೆ.