ದಾವಣಗೆರೆ:ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಗೆ ಒಳ್ಳೆಯ ಬೆಲೆ ಬಂದಿದೆ. ಪ್ರತಿ ಕೆ.ಜಿಗೆ 300ರಿಂದ 400 ರೂಪಾಯಿಗೆ ಮಾರಾಟವಾಗುತ್ತಿದೆ. ಹೀಗಾಗಿ ರೈತರು ಸಂತಸದಲ್ಲಿದ್ದಾರೆ. ಯಾದಗಿರಿ ಜಿಲ್ಲೆಯ ಚಿಂಚೋಳಿಯ ಯುವ ರೈತರೊಬ್ಬರು 50 ಚೀಲ ಬೆಳ್ಳುಳ್ಳಿ ಬೆಳೆದು ದಾವಣಗೆರೆ ಎಪಿಎಂಸಿಯಲ್ಲಿ ಮಾರಾಟ ಮಾಡಿದ್ದಾರೆ. ಈಗಿನ ಬೆಲೆಯಂತೆ ಇವರು 16 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. ಒಂದು ಕ್ವಿಂಟಾಲ್ಗೆ 32,500 ರೂಪಾಯಿಯಂತೆ ಬೆಳೆ ಮಾರಾಟವಾಗಿದೆ.
ಈ ಕುರಿತು ಸಂತಸ ವ್ಯಕ್ತಪಡಿಸಿರುವ ಯುವ ರೈತ ಹೊನ್ನಪ್ಪ ಗೌಡ ಶರಣಪ್ಪಗೌಡ ತಾರನಾಳ್, "8ರಿಂದ 10 ವರ್ಷಗಳ ಹಿಂದೆ ಬೆಳ್ಳುಳ್ಳಿ ಕ್ವಿಂಟಾಲ್ಗೆ 15ರಿಂದ 20 ಸಾವಿರ ರೂ.ಗೆ ಮಾರಾಟವಾಗುತ್ತಿತ್ತು. ಕಳೆದ ಹತ್ತು ವರ್ಷಗಳಲ್ಲಿ ಈ ರೀತಿ ಬೆಲೆ ನಮಗೆ ಸಿಕ್ಕಿರಲಿಲ್ಲ. ಈ ವರ್ಷ ಬೆಳ್ಳುಳ್ಳಿ ಬೀಜ 15ರಿಂದ 20 ಸಾವಿರ ರೂಪಾಯಿಗೆ ಸಿಕ್ಕಿತ್ತು. ಆದ್ರೂ ಕ್ವಿಂಟಾಲ್ ಬೆಳ್ಳುಳ್ಳಿ 32 ಸಾವಿರ ರೂ.ಗೆ ಮಾರಾಟ ಮಾಡ್ತೀವಿ ಎಂದು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ. ಇಲ್ಲಿಗೆ ಒಟ್ಟು 50 ಚೀಲ ಬೆಳ್ಳುಳ್ಳಿ ತಂದು ಮಾರಾಟ ಮಾಡಿದ್ದೇನೆ. ಕ್ವಿಂಟಾಲ್ಗೆ 27 ಸಾವಿರದಿಂದ 32,500 ರೂ ತನಕ ಮಾರಾಟವಾಗಿದೆ. ಇಷ್ಟು ದಿನಗಳ ಕಾಲ ಬೆಳ್ಳುಳ್ಳಿ ಮಾರಾಟ ಮಾಡಿದ್ರೂ ಇಂಥ ಬೆಲೆ ನೋಡಿರಲಿಲ್ಲ" ಎಂದು ಹೇಳಿದರು.