ಕರ್ನಾಟಕ

karnataka

ಗಂಗೊಳ್ಳಿ ದೇವಸ್ಥಾನದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು: ಆರೋಪಿ ಅರ್ಚಕ ಬಂಧನ - Temple Gold Theft

By ETV Bharat Karnataka Team

Published : 5 hours ago

ಆರೋಪಿ ದೇವಸ್ಥಾನದ ಅರ್ಚಕನನ್ನು ಪೊಲೀಸರು ಬಂಧಿಸಿದ್ದು, ದೇವಸ್ಥಾನದ ಚಿನ್ನಾಭರಣಗಳನ್ನು ವೈಯಕ್ತಿಕವಾಗಿ ಬಳಸಿಕೊಂಡಿರುವುದಾಗಿ ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Police Station and Accused priest
ಪೊಲೀಸ್​ ಠಾಣೆ ಹಾಗೂ ಆರೋಪಿ ಅರ್ಚಕ (ETV Bharat)

ಉಡುಪಿ: ಗಂಗೊಳ್ಳಿಯ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನ ದೇವಿಗೆ ಹರಕೆ ರೂಪದಲ್ಲಿ ಅರ್ಪಿಸಿದ್ದ ಒಟ್ಟು 21 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅರ್ಚಕನನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ. ಶಿರಸಿ ಸಾಲಕಣಿ ಗ್ರಾಮದ ಮೂರೆಗಾರ ಎಂಬಲ್ಲಿನ ನರಸಿಂಹ ಭಟ್‌ (43) ಬಂಧಿತ ಆರೋಪಿಯಾಗಿದ್ದು, ಈತ ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನದ ಅರ್ಚಕನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ:ಮಹಾಂಕಾಳಿ ದೇವಸ್ಥಾನದಲ್ಲಿ ದೇವಿಯ ಮೂರ್ತಿಗೆ ಆಡಳಿತ ಮಂಡಳಿ ಹಾಗೂ ಭಕ್ತರು ಸೇವೆ, ಹರಕೆ ರೂಪದಲ್ಲಿ ನೀಡಿದ ಚಿನ್ನಾಭರಣಗಳು ಅಲಂಕಾರ ಮಾಡಿದ ರೀತಿಯಲ್ಲಿ ಪ್ರತಿದಿನ ದೇವರ ಮೂರ್ತಿಯ ಮೈಮೇಲೆ ಇರುತ್ತಿತ್ತು. ಸೆ.21ರಂದು ಸಂಜೆ 7 ಗಂಟೆ ಸುಮಾರಿಗೆ ದೇವಸ್ಥಾನದ ಗರ್ಭಗುಡಿಯಲ್ಲಿ ಪೂಜೆ ಮಾಡುತ್ತಿದ್ದ ಆರೋಪಿ ಅರ್ಚಕ​ನಿಂದ, ಆಡಳಿತ ಮಂಡಳಿಯವರು ನವರಾತ್ರಿ ಉತ್ಸವದ ಸಲುವಾಗಿ ದೇವರ ಮೈಮೇಲಿದ್ದ ಚಿನ್ನಾಭರಣಗಳನ್ನು ಶುದ್ಧಾಚಾರ ಮಾಡಲು ನೀಡುವಂತೆ ಹೇಳಿ ಪಡೆದಿದ್ದರು. ಈ ವೇಳೆ ಆ ಆಭರಣಗಳ ವಿನ್ಯಾಸದಲ್ಲಿ ಬದಲಾವಣೆ ಹಾಗೂ ಅಸಲಿ ಚಿನ್ನದಂತೆ ಕಂಡುಬಂದಿಲ್ಲ. ಈ ಬಗ್ಗೆ ದೇವಸ್ಥಾನದ ಆಡಳಿತ ಸಮಿತಿ ಅನುಮಾನ ಬಂದು ವಿಚಾರಿಸಿದಾಗ ಅಸಲಿ ಚಿನ್ನಾಭರಣಗಳನ್ನು ತಾನು ತೆಗೆದಿರುವುದಾಗಿ ಅರ್ಚಕ ಒಪ್ಪಿಕೊಂಡಿದ್ದಾನೆ. ಅವುಗಳನ್ನು ತಾನು ವೈಯುಕ್ತಿಕವಾಗಿ ಬಳಸಿಕೊಂಡಿರುವುದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ಅಂದಾಜು 3.20 ಲಕ್ಷ ರೂ. ಮೌಲ್ಯದ 40 ಗ್ರಾಂ ತೂಕದ ಚಿನ್ನದ ಜೋಬಿನ ಸರ, 5.84 ಲಕ್ಷ ರೂ. ಮೌಲ್ಯದ 73 ಗ್ರಾಂ ತೂಕದ ಹವಳ ಸೇರಿದ ಚಿನ್ನದ ಕಾಸಿನ ತಾಳಿ ಸರ, 5.84 ಲಕ್ಷ ರೂ. ಮೌಲ್ಯದ 73 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, 5.12 ಲಕ್ಷ ರೂ. ಮೌಲ್ಯದ 64 ಗ್ರಾಂ ತೂಕದ ಚಿನ್ನದ ನೆಕ್ಲೇಸ್, 48 ಸಾವಿರ ರೂ. ಮೌಲ್ಯದ 6 ಗ್ರಾಂ ತೂಕದ 3 ತಾಳಿ, 64 ಸಾವಿರ ರೂ. ಮೌಲ್ಯದ 8 ಗ್ರಾಂ ತೂಕದ ಚಿನ್ನದ ಸರ ಸಹಿತ ಒಟ್ಟು 21.12 ಲಕ್ಷ ರೂ. ಮೌಲ್ಯದ 264 ಗ್ರಾಂ (33 ಪವನ್) ತೂಕದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನರಸಿಂಹ ಭಟ್​ನನ್ನು ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನಕ್ಕೆ ಮೇ 16ರಿಂದ ಅರ್ಚಕನಾಗಿ ನೇಮಿಸಿಕೊಂಡು ಮಾಸಿಕ ಸಂಬಳ ಹಾಗೂ ವಾಸಕ್ಕೆ ಮನೆ ನೀಡಿ ಬಾಡಿಗೆ ನೀಡಲಾಗುತ್ತಿತ್ತು. ಆರೋಪಿಯು ಮೇ 16ರಿಂದ ಸೆ.21ರ ಮಧ್ಯಾವಧಿಯಲ್ಲಿ ದೇವಸ್ಥಾನದ ಅರ್ಚಕನಾಗಿದ್ದುಕೊಂಡು ದೇವಸ್ಥಾನದಲ್ಲಿ ಈ ಕೃತ್ಯವೆಸಗಿದ್ದಾನೆ ಎಂದು ದೂರು ನೀಡಲಾಗಿತ್ತು.

ಗಂಗೊಳ್ಳಿ ಪಿಎಸ್​ಐ ಹರೀಶ್ ಆರ್. ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಹಾಡಹಗಲೇ ಮನೆಗೆ ನುಗ್ಗಿ ನಗದು, ಚಿನ್ನಾಭರಣ ದೋಚಿದ ಕಳ್ಳರು - House Theft

ABOUT THE AUTHOR

...view details