ಬೆಂಗಳೂರು: "ನೈಸ್ ಕಂಪನಿಯ ಹಗರಣ, ಭ್ರಷ್ಟಾಚಾರ, ಅಕ್ರಮದ ಕುರಿತು ಮಾಜಿ ಸಚಿವ ಟಿ. ಬಿ. ಜಯಚಂದ್ರ ಅಧ್ಯಕ್ಷತೆಯ ಸದನ ಸಮಿತಿ ವರದಿ ಅಂಗೀಕರಿಸಿ ಎಂಟು ವರ್ಷಗಳಾದರೂ ಜಾರಿ ಮಾಡಿಲ್ಲವೇಕೆ?" ಎಂದು ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ವಿ. ಗೋಪಾಲಗೌಡ ಪ್ರಶ್ನಿಸಿದರು.
ಭಾನುವಾರ ಬೆಂಗಳೂರಿನ ತುಮಕೂರು ರಸ್ತೆಯ ಜಯಸೂರ್ಯ ಸಭಾಂಗಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ನೈಸ್ ಭೂ ಸಂತ್ರಸ್ತ ರೈತರ ಹೋರಾಟ ಸಮಿತಿ ಸಂಘಟಿಸಿದ್ದ ಬೆಂಗಳೂರು ಜಿಲ್ಲಾ ಮಟ್ಟದ ನೈಸ್ ಸಂತ್ರಸ್ತ ರೈತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. "ಬಿಎಂಐಸಿ ಯೋಜನೆಗಾಗಿ ನೈಸ್ ಕಂಪನಿ ಜೊತೆ ಮಾಡಿಕೊಂಡ ಒಪ್ಪಂದ 27 ವರ್ಷಗಳಾದರೂ ಕಾರ್ಯಗತ ಆಗಿಲ್ಲ. ಪ್ರತಿಯೊಂದು ಹಂತದಲ್ಲಿಯೂ ಒಪ್ಪಂದಗಳನ್ನು ನೈಸ್ ಕಂಪನಿ ಉಲ್ಲಂಘಿಸಿದೆ. ಆದರೂ ನೈಸ್ ಕಂಪನಿ ಪರವಾಗಿ ಭೂಸ್ವಾಧೀನ ಪ್ರಕ್ರಿಯೆ ಮುಂದುವರೆಸುತ್ತಿರುವುದು ರೈತ ವಿರೋಧಿ ಹಾಗೂ ಜನ ವಿರೋಧಿ ಕ್ರಮವಾಗಿದೆ. ಈ ಕೂಡಲೇ ಭೂಸ್ವಾಧೀನ ರದ್ದುಪಡಿಸಿ ರೈತರಿಗೆ ಜಮೀನು ವಾಪಸ್ ಕೊಡಬೇಕು" ಎಂದು ಆಗ್ರಹಿಸಿದರು.
"ಭೂಸ್ವಾಧೀನದ ಅಕ್ರಮ ಮತ್ತು ಕಾನೂನು ಬಾಹಿರ ಕ್ರಮಗಳನ್ನು ಸಿಂಗೂರ್ ತೀರ್ಪಿನಲ್ಲಿ ವಿವರವಾಗಿ ಚರ್ಚಿಸಲಾಗಿದ್ದು, ಪರಿಹಾರ ಹಣ ಮರು ಪಾವತಿಸದೇ ಭೂಮಿ ವಾಪಸ್ ಮಾಡುವ ತೀರ್ಪು ನೀಡಲಾಗಿದೆ. ಅದೇ ತೀರ್ಪಿನ ಆಧಾರದಲ್ಲಿ ಭೂಸ್ವಾಧೀನ ರದ್ದುಪಡಿಸಬಹುದು. ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘಿಸಿ, ಕೆಐಎಡಿಬಿ ಭೂಸ್ವಾಧೀನದ ಮೂಲಕ ಪಡೆದ ಭೂಮಿಯನ್ನು ಮೂಲ ಒಪ್ಪಂದಕ್ಕೆ ವಿರುದ್ಧವಾಗಿ ವಸತಿ ಅಪಾರ್ಟ್ಮೆಂಟ್ ನಿರ್ಮಿಸಿ ಮಾರಾಟ ಮಾಡುತ್ತಿರುವ ನೈಸ್ ಸಂಸ್ಥೆ ಅಕ್ರಮಕ್ಕೆ ಸರ್ಕಾರ ಕಡಿವಾಣ ಹಾಕಬೇಕು" ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ಮಾತನಾಡಿ, "ರಸ್ತೆ ನಿರ್ಮಾಣದ ಹೆಸರಿನಲ್ಲಿ ಬೃಹತ್ ಪ್ರಮಾಣದ ಭ್ರಷ್ಟಾಚಾರ, ಹಗರಣ, ಅಕ್ರಮ ನಡೆಸಿರುವ ನೈಸ್ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ರೈತರ ಒಪ್ಪಿಗೆ ಇಲ್ಲದೇ ಅವರ ಗಮನಕ್ಕೆ ಬಾರದಂತೆ ಭೂಸ್ವಾಧೀನ ಮಾಡಿರುವ ಎಲ್ಲಾ ಪ್ರಕರಣಗಳನ್ನು ರದ್ದು ಪಡಿಸಬೇಕು. ವರ್ಷಕ್ಕೆ ಹತ್ತು ರೂ.ನಂತೆ ಮೂವತ್ತು ವರ್ಷಗಳಿಗೆ ಗುತ್ತಿಗೆ ಪಡೆದಿರುವ ಸರ್ಕಾರಿ ಭೂಮಿಯನ್ನು ಸರ್ಕಾರ ವಾಪಸ್ ಪಡೆಯಬೇಕು. ಯಾವುದೇ ಕಾರಣಕ್ಕೂ ಗುತ್ತಿಗೆ ನವೀಕರಣ ಮಾಡಬಾರದು. 30 ವರ್ಷಗಳ ಹಿಂದಿನ ಭೂಸ್ವಾಧೀನ ಪ್ರಕಟಣೆಯ ಆಧಾರದಲ್ಲಿ ಭೂಮಿ ಕಿತ್ತುಕೊಳ್ಳಲು ಅವಕಾಶ ನೀಡಬಾರದು" ಎಂದು ಒತ್ತಾಯಿಸಿದರು.
"ಎಟಿ ರಾಮಸ್ವಾಮಿ ಸಮಿತಿ, ಟಿಬಿ ಜಯಚಂದ್ರ ಸಮಿತಿ ಹಾಗೂ ಹಲವಾರು ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪುಗಳಲ್ಲಿ ಒಪ್ಪಂದಕ್ಕೆ ಹೊರತಾದ ಹೆಚ್ಚುವರಿ ಭೂ ಕಬಳಿಕೆ ವಶಕ್ಕೆ ಪಡೆಯಲು ಸ್ಪಷ್ಟವಾಗಿ ಹೇಳಿದ್ದರೂ ವಾಪಸ್ ಪಡೆಯಲು ಮೀನಮೇಷ ಎಣಿಸಲಾಗುತ್ತಿದೆ. ಈಗಾಗಲೇ ಭ್ರಷ್ಟ ರಾಜಕಾರಣಿಗಳು, ಉನ್ನತ ಅಧಿಕಾರಿಗಳ ಬೆಂಬಲದ ಮೇಲೆ ಕೆಐಎಡಿಬಿ, ಪಿಡಬ್ಲ್ಯೂಡಿ ಮುಂತಾದ ಇಲಾಖೆಗಳನ್ನು ದಾಳವಾಗಿ ಬಳಸಲಾಗುತ್ತಿದೆ. ರೈತರು ಕಾನೂನು ಬಾಹಿರ ಅಕ್ರಮಗಳ ವಿರುದ್ಧ ತಮ್ಮ ಭೂಮಿ ರಕ್ಷಿಸಿಕೊಳ್ಳಲು ಕೋರ್ಟ್ಗಳಿಗೆ ಅಲೆದಾಡಿ ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ಇಂತಹ ರೈತರನ್ನು ಭೂ ಕಬಳಿಕೆಯಿಂದ ಕಾಪಾಡಬೇಕಾದ ಸರ್ಕಾರಗಳು ನೈಸ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೈಸ್ ಭೂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎನ್ ವೆಂಕಟಾಚಲಯ್ಯ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ನೈಸ್ ಹೋರಾಟ ಸಮಿತಿಯ ಮುಖಂಡರಾದ ವೆಂಕಟಚಲಪತಿ, ಸತ್ಯನಾರಾಯಣ, ಯೋಗನರಸಿಂಹಮೂರ್ತಿ, ಸ್ವಾಮಿರಾಜ್, ಸಣ್ಣರಂಗಯ್ಯ, ಅಣ್ಣಯ್ಯ, ಚಂದ್ರಣ್ಣ, ಚನ್ನೇಗೌಡ, ಶ್ರೀನಿವಾಸ ಮುಂತಾದವರು ವೇದಿಕೆಯಲ್ಲಿ ಇದ್ದರು.