World Alzheimers Day 2024: ಇಂದು (ಸೆಪ್ಟೆಂಬರ್ 21) ವಿಶ್ವ ಆಲ್ಝೈಮರ್ಸ್ ದಿನ ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ಈ ರೋಗವು ವಯಸ್ಸಾದ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಈ ವರ್ಷದ ವಿಶ್ವ ಆಲ್ಝೈಮರ್ಸ್ ದಿನದ ಥೀಮ್ 'ನೋ ಡಿಮೆನ್ಶಿಯಾ, ನೋ ಆಲ್ಝೈಮರ್ಸ್'. ಜೈಪುರದ ಸವಾಯಿ ಮಾನ್‌ಸಿಂಗ್ ಆಸ್ಪತ್ರೆಯ ಹಿರಿಯ ನರರೋಗ ತಜ್ಞ ಡಾ.ದಿನೇಶ್ ಖಂಡೇಲ್‌ವಾಲ್ ಈ ಕುರಿತು ಮಾತನಾಡಿ, ಅಲ್ಝೈಮರ್ಸ್ ರೋಗದ ಪ್ರಮಾಣವು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ವೇಗವಾಗಿ ಹೆಚ್ಚುತ್ತಿದೆ ಎಂದು ತಿಳಿಸಿದರು.
ಲಾಂಗಿಟ್ಯೂಡಿನಲ್ ಏಜಿಂಗ್ ಸ್ಟಡಿ ಆಫ್ ಇಂಡಿಯಾ(Longitudinal Ageing Study in India) ಪ್ರಕಾರ, ಭಾರತದಲ್ಲಿ ಸುಮಾರು 8.8 ಮಿಲಿಯನ್ ಜನರು ಆಲ್ಝೈಮರ್‌ನಿಂದ ಬಳಲುತ್ತಿದ್ದಾರೆ. ಮತ್ತು ಭವಿಷ್ಯದಲ್ಲಿ ಈ ಅಂಕಿ ಅಂಶವು ಹೆಚ್ಚಾಗುವ ಸಾಧ್ಯತೆಯಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದಾದ್ಯಂತ ಸುಮಾರು 55 ಮಿಲಿಯನ್ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪ್ರತಿ ವರ್ಷ ಸುಮಾರು 10 ಮಿಲಿಯನ್ ಹೊಸ ಪ್ರಕರಣಗಳು ವರದಿಯಾಗುತ್ತವೆ.
ಆಲ್ಝೈಮರ್ಸ್ ಕಾಯಿಲೆಯ ಲಕ್ಷಣಗಳೇನು?: ನರರೋಗ ತಜ್ಞ ಡಾ. ದಿನೇಶ್ ಖಂಡೇಲ್ವಾಲ್ ಮಾತನಾಡಿ, ಸಾಮಾನ್ಯವಾಗಿ 60 ವರ್ಷ ವಯಸ್ಸಿನ ನಂತರ ಆಲ್ಝೈಮರ್ಸ್(ಮರೆವು) ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವು ಸಂದರ್ಭಗಳಲ್ಲಿ, ಆಲ್ಝೈಮರ್ನ ಕಾಯಿಲೆ ಚಿಕ್ಕ ವಯಸ್ಸಿನಲ್ಲಿಯೂ ಬರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯ ಸ್ಮರಣಶಕ್ತಿ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಇದರ ಹೊರತಾಗಿ ರೋಗಿಯಲ್ಲಿ ಕಂಡುಬರುವ ಇತರ ಕೆಲವು ಲಕ್ಷಣಗಳು ಇಲ್ಲಿವೆ.
- ಆಲ್ಝೈಮರ್ಸ್ ಕಾಯಿಲೆ ಇರುವವರು ತಮ್ಮ ದೈನಂದಿನ ಚಟುವಟಿಕೆಗಳನ್ನು ಮರೆತುಬಿಡುತ್ತಾರೆ.
- ಅಲ್ಲದೆ, ಮೆಮೊರಿ ತ್ವರಿತವಾಗಿ ದುರ್ಬಲಗೊಳ್ಳುತ್ತದೆ. ಥಟ್ಟನೆ ನಿದ್ರೆಗೆ ಜಾರುತ್ತಾರೆ. ರೋಗಿಯು ಒಂದೇ ವಿಷಯವನ್ನು ಪುನರಾವರ್ತನೆ ಮಾಡುತ್ತಾನೆ.
- ರೋಗಿಗೆ ಸಣ್ಣ ವಿಷಯಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಇತರರ ಮೇಲೆ ಅವಲಂಬಿತರಾಗುತ್ತಾರೆ. ಇದರಿಂದಾಗಿ ಇತರ ಕುಟುಂಬ ಸದಸ್ಯರು ಸಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ.
ಆಲ್ಝೈಮರ್ಸ್ ಕಾಯಿಲೆ ಚಿಕಿತ್ಸೆ ಹೇಗೆ?: ಡಾ.ದಿನೇಶ್ ಖಂಡೇಲ್ವಾಲ್ ಪ್ರತಿಕ್ರಿಯಿಸಿ, ‘ಅಲ್ಝೈಮರ್ಸ್ ನಂತಹ ಕಾಯಿಲೆಗೆ ಚಿಕಿತ್ಸೆ ಸಾಕಷ್ಟು ಸುಲಭವಾಗಿದೆ. ಭಾರತದಲ್ಲಿ ಇಂದಿಗೂ ಸುಧಾರಿತ ಔಷಧಗಳು ಲಭ್ಯವಿಲ್ಲ. ಶ್ರೀಮಂತ ರಾಷ್ಟ್ರಗಳಲ್ಲಿ ವಿಶೇಷ ರೀತಿಯ ಔಷಧವನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಆಲ್ಝೈಮರ್ ಅನ್ನು ಗುಣಪಡಿಸುತ್ತದೆ. ಆದರೆ, ಅದರ ಆರಂಭಿಕ ಹಂತಗಳಲ್ಲಿ ಚಿಕಿತ್ಸೆಯು ತುಂಬಾ ದುಬಾರಿಯಾಗಿದೆ.
ಚಿಕಿತ್ಸೆಯ ಬಗ್ಗೆ ಮಾತನಾಡುವುದಾದರೆ, 60 ವರ್ಷಕ್ಕಿಂತ ಮೇಲ್ಪಟ್ಟವರ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಮತ್ತು ಆಲ್ಝೈಮರ್ಸ್ ಕಾಯಿಲೆಗೆ ಸಂಬಂಧಿಸಿದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಅವರು ತಿಳಿಸುತ್ತಾರೆ. ಇದಲ್ಲದೆ, ರೋಗಿಯು ಸಣ್ಣ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಡೈರಿಯನ್ನು ಇಟ್ಟುಕೊಳ್ಳಬೇಕು. ಯೋಗ ಮತ್ತು ದೈಹಿಕ ವ್ಯಾಯಾಮ ಕೂಡ ಬಹಳ ಮುಖ್ಯ. ಜೊತೆಗೆ ಸಾಕಷ್ಟು ನಿದ್ರೆ ಕೂಡ ಮಾಡಬೇಕಾಗುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ನೀವು ಈ ವೆಬ್ಸೈಟ್ನ್ನು ಸಂಪರ್ಕಿಸಬಹುದು:
https://www.ncbi.nlm.nih.gov/books/NBK499922/
ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.