ಶಿವಮೊಗ್ಗ: ನಗರದಲ್ಲಿ ಇಂದು ಮುಸ್ಲಿಮರು ಈದ್ ಮಿಲಾದ್ ಮೆರವಣಿಗೆಯನ್ನು ನಡೆಸಿದರು. ನಗರದ ಗಾಂಧಿ ಬಜಾರ್ನ ಜಾಮೀಯ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮುಸ್ಲಿಂ ಸಮುದಾಯದವರು ಮೆರವಣಿಗೆಯನ್ನು ಪ್ರಾರಂಭಿಸಿದರು.
ಮೆರವಣಿಗೆಯು ಗಾಂಧಿ ಬಜಾರ್ನ ಜಾಮೀಯ ಮಸೀದಿಯಿಂದ ಹೊರಟು ಲಷ್ಕರ್ ಮೊಹಲ್ಲ, ಸಾರ್ವಕರ್ ನಗರ, ಪೆಕ್ಷನ್ ಮೊಹಲ್ಲ, ಬಿ. ಹೆಚ್ ರಸ್ತೆ, ಟ್ಯಾಂಕ್ ಮೊಹಲ್ಲ, ಮಹಾವೀರ ವೃತ್ತ, ಬಾಲರಾಜ್ ಅರಸ್ ರಸ್ತೆ, ಟಿ. ಶೀನಪ್ಪ ಶೆಟ್ಟಿ ವೃತ್ತ, ನೆಹರು ರಸ್ತೆ, ಅಮೀರ್ ಅಹಮದ್ ವೃತ್ತದಿಂದ ಪುನಃ ಬಿ. ಹೆಚ್ ರಸ್ತೆಯಿಂದ ಸಾಗಿ ಅಶೋಕ ವೃತ್ತ, ಹೊಸ ತೀರ್ಥಹಳ್ಳಿ ರಸ್ತೆ, ಟ್ಯೆಂಪೊ ಸ್ಟಾಂಡ್ನಿಂದ ಹಳೇ ತೀರ್ಥಹಳ್ಳಿ ರಸ್ತೆಯ ಮೂಲಕ ಅಮೀರ್ ಅಹಮದ್ ವೃತ್ತಕ್ಕೆ ಬಂದು ಮೆರವಣಿಗೆ ಮುಕ್ತಾಯವಾಗಿದೆ.
ಡಿಜೆಗೆ ಹೆಜ್ಜೆ ಹಾಕಿದ ಯುವಜನತೆ : ಕೃತಕ ಆನೆ ಬಳಕೆ - ಈದ್ ಮಿಲಾದ್ ಮೆರವಣಿಗೆಯಲ್ಲಿ ಯುವಕರು ಡಿಜೆಗೆ ಸಖತ್ ಸ್ಟೆಪ್ ಹಾಕಿದರು. ಸುಮಾರು ಹತ್ತಕ್ಕೂ ಹೆಚ್ಚು ಡಿಜೆ ಹೊತ್ತ ವಾಹನಗಳು ಮೆರವಣಿಗೆಯಲ್ಲಿ ಸಾಗಿದವು. ಈ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಗಮನ ಸೆಳೆಯಿತು. ಈ ಆನೆಯ ಮೇಲೆ ಟಿಪ್ಪು ನಗರದ ಷರೀಫ್ ಎಂಬುವರು ಬಂದಿದ್ದು ನೋಡುಗರ ಗಮನ ಸೆಳೆಯಿತು.
ಅಲ್ಲದೆ ನಗರದ ಗೋಪಾಲಗೌಡ ಬಡಾವಣೆಯ ದ್ರೌಪದಮ್ಮನ ವೃತ್ತದಲ್ಲಿ ಮುಸ್ಲಿಂರು, ಹಿಂದೂಗಳಿಗೆ ಪಾನಕ ಹಾಗೂ ತಂಪು ಪಾನೀಯ ನೀಡಿ ಕೋಮು ಸೌಹಾರ್ದತೆ ಮೆರೆದರು.
ಕಳೆದ ಬಾರಿ ಗಲಾಟೆ ಆಗಿದ್ದ ರಾಗಿಗುಡ್ಡದಲ್ಲಿ ಮೆರವಣಿಗೆಯು ಸರಾಗವಾಗಿ ನಡೆಯಿತು. ಜಿಲ್ಲಾ ಪೊಲೀಸರು ಎಲ್ಲಾ ಕಡೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡಿದ್ದರು.
ಬೆಳಗಾವಿಯಲ್ಲಿ ಈದ್–ಮಿಲಾದ್ ಸಂಭ್ರಮ: ಬೆಳಗಾವಿ ನಗರದಲ್ಲಿ ಇಸ್ಲಾಂ ಧರ್ಮಿಯರ ಪವಿತ್ರ ಹಬ್ಬ ಈದ್-ಮಿಲಾದ್ ಪ್ರಯುಕ್ತ ಹಮ್ಮಿಕೊಂಡಿದ್ದ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಯುವ ಮನಸ್ಸುಗಳು ಮಳೆ ನಡುವೆಯೂ ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಸಾರ್ವಜನಿಕ ಗಣೇಶ ಮಂಡಳಿಗಳ ಮುಖಂಡರು ಭಾಗಿಯಾಗಿ ಭಾವೈಕ್ಯತೆ ಮೆರೆದರು.
ಸೆ. 16ರಂದು ಈದ್–ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಆಚರಿಸಿದ್ದು, ಅವತ್ತೇ ಬೆಳಗ್ಗೆ ಈದ್–ಮಿಲಾದ್ ಮೆರವಣಿಗೆಯೂ ನಡೆಯಬೇಕಿತ್ತು. ಆದರೆ, ಅದರ ಮಾರನೇ ದಿನವೇ ಸೆ.17ರಂದು ಸಾರ್ವಜನಿಕ ಗಣೇಶ ಮೂರ್ತಿಗಳ ನಿಮಜ್ಜನ ಮೆರವಣಿಗೆ ಹಿನ್ನೆಲೆ ಮುಸ್ಲಿಂ ಮುಖಂಡರು ಈದ್-ಮಿಲಾದ್ ಮೆರವಣಿಗೆ ಮುಂದೂಡಿ, ನಿಮಜ್ಜನ ಮೆರವಣಿಗೆ ಅದ್ಧೂರಿಯಾಗಿ ನಡೆಯಲು ಅನುವು ಮಾಡಿಕೊಟ್ಟಿದ್ದರು. ಈ ಮೂಲಕ ಕೋಮು ಸೌಹಾರ್ದತೆಗೆ ಬೆಳಗಾವಿ ಸಾಕ್ಷಿಯಾಗಿತ್ತು. ಆದ್ದರಿಂದ ಭಾನುವಾರ ಅದ್ಧೂರಿ ಮೆರವಣಿಗೆಯನ್ನು ಮುಸ್ಲಿಂ ಬಾಂಧವರು ನೆರವೇರಿಸಿದರು.
ಬೆಳಗಾವಿ ನಗರದ ಹಳೇ ಪಿ.ಬಿ. ರಸ್ತೆಯಿಂದ ಆರಂಭವಾದ ಮೆರವಣಿಗೆಯು ಕೇಂದ್ರೀಯ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚನ್ನಮ್ಮ ವೃತ್ತ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ ಮಾರ್ಗವಾಗಿ ಸಂಚರಿಸಿ ಕ್ಯಾಂಪ್ ಪ್ರದೇಶದ ಹಜರತ್ ಸೈಯದ್ ಅಸದ್‌ಖಾನ್ ದರ್ಗಾ ಆವರಣಕ್ಕೆ ಬಂದು ಸಂಪನ್ನಗೊಂಡಿತು. ಅಲ್ಲದೇ ನಗರದ ವಿವಿಧ ಬಡಾವಣೆಗಳಲ್ಲೂ ಪ್ರತ್ಯೇಕವಾಗಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕವ್ವಾಲಿಗಳಿಗೆ ಕುಣಿದು ಕುಪ್ಪಳಿಸಿ, ಸಂಗೀತವಾದ್ಯಗಳನ್ನು ನುಡಿಸಿ ಸಂಭ್ರಮಿಸಿದರು. ಮಕ್ಕಳು, ಯುವಕರು ಶುಭ್ರ ಬಿಳಿ ಬಟ್ಟೆ ಧರಿಸಿ ಗಮನ ಸೆಳೆದರು.
ಕೂಡಲಸಂಗಮ ಶ್ರೀಗೆ ಗೌರವ: ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್ ಮುಗಿದ ಬಳಿಕ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನಗರದ ಚೆನ್ನಮ್ಮ ವೃತ್ತದ ಕಡೆ ಆಗಮಿಸಿದರು. ಇದೇ ವೇಳೆ ಈದ್-ಮಿಲಾದ್ ಮೆರವಣಿಗೆ ಕೂಡ ಇಲ್ಲಿಯೇ ಆಗಮಿಸಿತ್ತು. ಆಗ ಸ್ವಾಮೀಜಿಗೆ ಗೌರವ ಸಲ್ಲಿಸಿದ ಮುಸ್ಲಿಂ ಬಾಂಧವರು ತಮ್ಮ ಸಂಗೀತ ವಾದ್ಯಗಳನ್ನು ಬಂದ್ ಮಾಡಿದರು. ಆಗ ಸ್ವಾಮೀಜಿ ರಾಣಿ ಚೆನ್ನಮ್ಮ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಅಲ್ಲಿಂದ ತೆರಳಿದರು.
ಇದನ್ನೂ ಓದಿ : ಭಾವೈಕ್ಯತೆ: ಗಣೇಶೋತ್ಸವ ಸಮಿತಿಗೆ ಮುಸ್ಲಿಂ, ಈದ್ ಮಿಲಾದ್ ಸಮಿತಿಗೆ ಹಿಂದೂಗಳೇ ಅಧ್ಯಕ್ಷರು, ಉಪಾಧ್ಯಕ್ಷರು - Hindu Muslim Harmony