ಅಮರಾವತಿ/ತಿರುಪತಿ (ಆಂಧ್ರಪ್ರದೇಶ): ಆಗಮ ಸಲಹಾ ಮಂಡಳಿಯ ತೀರ್ಮಾನದಂತೆ ಸೋಮವಾರ ತಿರುಮಲ ದೇವಸ್ಥಾನದಲ್ಲಿ ಶಾಂತಿ ಹೋಮ (ಶಾಂತಿ ಹೋಮ) ನಡೆಯಲಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯು ಎಲ್ಲಾ ದೇವಸ್ಥಾನಗಳಲ್ಲಿ ಹೋಮಗಳನ್ನು ನಡೆಸುತ್ತದೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಸಹ ಪರಿಶೀಲಿಸುತ್ತದೆ ಎಂದು ಅವರು ಹೇಳಿದರು.
ತನಿಖೆಗೆ ಎಸ್‌ಐಟಿ ರಚನೆ: ಐಜಿ ಶ್ರೇಣಿಯ ಅಧಿಕಾರಿ ನೇತೃತ್ವದಲ್ಲಿ ಎಸ್‌ಐಟಿ (ವಿಶೇಷ ತನಿಖಾ ತಂಡ) ರಚಿಸಿರುವುದಾಗಿ ಮತ್ತು ಎಸ್‌ಐಟಿ ವರದಿಯ ಆಧಾರದ ಮೇಲೆ ಕಳಪೆ ಗುಣಮಟ್ಟದ ಕಲಬೆರಕೆ ತುಪ್ಪ ಬಳಸಿ ತಿರುಪತಿ ಲಡ್ಡು ಅಪವಿತ್ರಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ನಾಯ್ಡು ಎಚ್ಚರಿಕೆ ರವಾನಿಸಿದರು.
ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಆಯಾ ಪ್ರಾರ್ಥನಾ ಮಂದಿರಗಳಲ್ಲಿ ಎಲ್ಲ ಧರ್ಮದವರಿಗೂ ಗೌರವ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು. ಧಾರ್ಮಿಕ ಸೌಹಾರ್ದತೆ ಕಾಪಾಡಲು ಅಗತ್ಯಬಿದ್ದರೆ ವಿಶೇಷ ಕಾನೂನು ಕೂಡ ತರಲಾಗುವುದು ಎಂದು ಸಿಎಂ ಪ್ರತಿಪಾದಿಸಿದರು.
ಆಗಮ ಶಾಸ್ತ್ರ ವಿದ್ವಾಂಸರು ಮತ್ತು ಇತರ ತಜ್ಞರನ್ನೊಳಗೊಂಡ ವಿಶೇಷ ಸಮಿತಿಯು ಸಂಪ್ರದಾಯಗಳನ್ನು ಸಂರಕ್ಷಿಸಲು ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ಶಿಫಾರಸುಗಳನ್ನು ಪಡೆಯಲಿದೆ. ಎಲ್ಲ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಗೌರವ ಕೊಡಲು ಕ್ರಮ ಕೈಗೊಳ್ಳಲಾಗುವುದು, ಭಕ್ತರ ಭಾವನೆಗಳನ್ನು ಕಾಪಾಡುವ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳುವುದಾಗಿ ಎಂದು ಸಿಎಂ ನಾಯ್ಡು ಹೇಳಿದರು.
ದೇವರಿಗೆ ಅಗೌರವ ತೋರುವ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ಎಲ್ಲಾ ವ್ಯವಸ್ಥೆಗಳನ್ನು ಸುಧಾರಿಸಲು ಮತ್ತು ದೇವಾಲಯಗಳ ನಿರ್ವಹಣೆಯನ್ನು ಪಾವಿತ್ರ್ಯದಿಂದ ಮಾಡಲು ನಿರ್ಧರಿಸಲಾಗಿದೆ ಎಂದರು.
ಏತನ್ಮಧ್ಯೆ, ಇತ್ತೀಚಿನ ಲಡ್ಡು ನೈವೇದ್ಯದಿಂದ ಉದ್ಭವಿಸುವ ವಿವಿಧ ವಿವಾದಾತ್ಮಕ ವಿಷಯಗಳ ಬಗ್ಗೆ ಚರ್ಚಿಸಲು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸರ್ವೋಚ್ಚ ಮಂಡಳಿಯು ಸೋಮವಾರ ತಿರುಪತಿ ದೇವಸ್ಥಾನ ಪಟ್ಟಣದಲ್ಲಿ ಸಭೆ ನಡೆಸಲಿದೆ. ಹಿಂದೂ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಹೊರತರುವ ವಿಷಯದ ಬಗ್ಗೆಯೂ ವಿಹೆಚ್‌ಪಿ ನಾಯಕರು ಚರ್ಚಿಸಲಿದ್ದಾರೆ.
ಇದನ್ನೂ ಓದಿ: ತಿರುಪತಿ ಲಡ್ಡು - ನಂದಿನಿ ತುಪ್ಪಕ್ಕೆ ದಶಕಗಳ ನಂಟು: ಇದೀಗ ಮತ್ತೆ ಲಡ್ಡುಗೆ ನಂದಿನಿ ತುಪ್ಪದ ಘಮಲು! - Tirupati Laddu