ಕರ್ನಾಟಕ

karnataka

ಗಣೇಶ ಪ್ರತಿಷ್ಠಾಪನೆ: ಕೇದಾರನಾಥದ ವಿಶೇಷ ಪ್ರತಿಕೃತಿ ನಿರ್ಮಿಸಿದ ಹಾವೇರಿ ಕುಟುಂಬ - Kedarnath Special Replica

By ETV Bharat Karnataka Team

Published : Sep 10, 2024, 12:53 PM IST

Updated : Sep 10, 2024, 2:49 PM IST

ಪ್ರತೀವರ್ಷ ವೈವಿಧ್ಯಮಯ ಪ್ರತಿಕೃತಿಗಳನ್ನು ರಚಿಸುವ ಹಾವೇರಿಯ ಈ ಕುಟುಂಬ ಈ ಬಾರಿ ಗಣೇಶ ಪ್ರತಿಷ್ಠಾಪನೆಗೆ ಕೇದಾರನಾಥದ ಪ್ರತಿಕೃತಿ ನಿರ್ಮಿಸಿ ಸಂಭ್ರಮಿಸಿದೆ.

Ganesha installation: Kedarnath special replica built by Haveri family
ಗಣೇಶ ಪ್ರತಿಷ್ಠಾಪನೆ: ಕೇದಾರನಾಥ ವಿಶೇಷ ಪ್ರತಿಕೃತಿ ನಿರ್ಮಿಸಿದ ಹಾವೇರಿ ಕುಟುಂಬ (ETV Bharat)

ಗಣೇಶ ಪ್ರತಿಷ್ಠಾಪನೆ: ಕೇದಾರನಾಥ ವಿಶೇಷ ಪ್ರತಿಕೃತಿ ನಿರ್ಮಿಸಿದ ಹಾವೇರಿ ಕುಟುಂಬ (ETV Bharat)

ಹಾವೇರಿ:ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಕೆಲವು ಕುಟುಂಬಗಳು ಪ್ರತೀವರ್ಷ ವೈವಿಧ್ಯಮಯವಾಗಿ ಅಲಂಕಾರ ಮಾಡಿ ಸಂಭ್ರಮಿಸುತ್ತವೆ. ಪೌರಾಣಿಕ, ಐತಿಹಾಸಿಕ ಸೇರಿದಂತೆ ಪ್ರಸಿದ್ಧ ಧಾರ್ಮಿಕ ಸ್ಥಳಗಳ ಪ್ರತಿಕೃತಿ ರಚಿಸಿ ಅದರಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವುದುಂಟು. ಗಣೇಶ ಚತುರ್ಥಿಗೆ ತಿಂಗಳುಗಳಿರುವಾಗಲೇ ಕೆಲವು ಕುಟುಂಬಗಳು ಯೋಜನೆ ರೂಪಿಸಿ ಗಣೇಶನ ಸ್ಥಾಪನೆಗೆ ವಿಶೇಷ ಪ್ರತಿಕೃತಿ ರಚಿಸಲು ಮುಂದಾಗುತ್ತವೆ. ಈ ರೀತಿ ಹಲವು ವರ್ಷಗಳಿಂದ ವಿಶಿಷ್ಟ ಅಲಂಕಾರ ಮಾಡುವ ಕುಟುಂಬಗಳು ಹಾವೇರಿಯಲ್ಲಿವೆ.

ಅಂತಹ ಕುಟುಂಬಗಳ ಪೈಕಿ ಹಾವೇರಿ ಬಸವೇಶ್ವರನಗರ ಸಿ ಬ್ಲಾಕ್ ಬಳಿ ಇರುವ ಹಲಗಣ್ಣನವರ್ ಕುಟುಂಬವೂ ಒಂದು. ಇವರು ಕಳೆದ 23 ವರ್ಷಗಳಿಂದ ಗಣೇಶನ ಪ್ರತಿಷ್ಠಾಪನೆಗೆ ವಿಶೇಷ ಪ್ರತಿಕೃತಿಗಳನ್ನು ನಿರ್ಮಿಸುತ್ತಾ ಬರುತ್ತಿದ್ದಾರೆ. ಗಣೇಶ ಪ್ರತಿಷ್ಠಾಪನೆಯ ಜೊತೆಗೆ ವಿಶಿಷ್ಟ ಅಲಂಕಾರ ಮಾಡಲಾಗುತ್ತದೆ. ಕಳೆದ ವರ್ಷ ಕೃಷ್ಣನ ಲೀಲೆಗಳ ಅಲಂಕಾರ ಮಾಡಿದ್ದ ಈ ಕುಟುಂಬ ಈ ವರ್ಷ ಕೇದಾರನಾಥದ ಪ್ರತಿಕೃತಿಯನ್ನು ನಿರ್ಮಿಸಿ, ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ.

ಕೇದಾರನಾಥ ದೇವಸ್ಥಾನ, ದೇವಸ್ಥಾನಕ್ಕೆ ಸಾಗುವ ಮಾರ್ಗ, ಪ್ರತಿಕೃತಿಗಳು ಇಲ್ಲಿ ಕಣ್ಮನ ಸೆಳೆಯುತ್ತಿವೆ. ಕೇದಾರನಾಥದ ಸುತ್ತ ಇರುವ ಹಿಮಚ್ಚಾಧಿತ ಪರ್ವತಗಳ ಪ್ರತಿಕೃತಿ ಅಲಂಕಾರಕ್ಕೆ ಮತ್ತಷ್ಟು ಮೆರುಗು ನೀಡುವಂತಿವೆ. ಕುದುರೆ, ಟೋಕರಿ, ಡೋಲಿಗಳ ಮೇಲೆ ಸಾಗುವ ಭಕ್ತರು, ಅಷ್ಟೇ ಯಾಕೆ? ಹೆಲಿಕ್ಯಾಪ್ಟರ್ ಮೂಲಕ ಸಾಗುವ ಭಕ್ತರ ಪ್ರತಿಕೃತಿಗಳನ್ನೂ ರಚಿಸಲಾಗಿದೆ. ಕೇದಾರನಾಥಕ್ಕೆ ಹೋಗುವ ಮುನ್ನ ಹರಿಯುವ ಮಂದಾಕಿನಿ ನದಿ ಅದನ್ನು ಸಾಗುವ ಭಕ್ತರ ದಂಡನ್ನು ಇಲ್ಲಿ ನಿರ್ಮಿಸಲಾಗಿದೆ. ದೇವಸ್ಥಾನದ ಆವರಣದಲ್ಲಿರುವ ನಾಗಾ ಸಾಧುಗಳ ಪ್ರತಿಕೃತಿಗಳು ಸೇರಿದಂತೆ ವಿವಿಧ ಸಾಧುಸನ್ಯಾಸಿಗಳ ವೇಷಭೂಷಣಗಳು ಸುಂದರವಾಗಿವೆ. ದೇವಸ್ಥಾನದ ಸುತ್ತಮುತ್ತ ನಿರ್ಮಿಸಿರುವ ಗಿಡಮರಗಳು ಹಸಿರಿನಿಂದ ಕಂಗೊಳಿಸುತ್ತಿವೆ. ದೇವಸ್ಥಾನದ ಒಳಗೆ ಇರುವ ಶಿವನನ್ನು ಸಹ ಅಲ್ಲಿಯ ರೂಪದಲ್ಲಿಯೇ ರಚಿಸಲಾಗಿದೆ.

ಹಲಗಣ್ಣನವರ ಕುಟುಂಬದ ಗೃಹಿಣಿ ದೀಪಾ ಕಳೆದ 15 ದಿನಗಳಿಂದ ಶ್ರಮಿಸಿ ಈ ಕೇದಾರನಾಥ ಪ್ರತಿಕೃತಿ ರೂಪಿಸಿದ್ದಾರೆ. "ಈ ವರ್ಷ ಕೇದಾರನಾಥ ದರ್ಶನ ಪಡೆಯಬೇಕೆನ್ನುವ ತಯಾರಿಯಲ್ಲಿದ್ದೆವು. ಆದರೆ ಕಾರಣಾಂತರಗಳಿಂದ ಹೋಗಿಲ್ಲ. ಪ್ರವಾಸಕ್ಕಾಗಿ ಪುಸ್ತಕ ಯೂಟ್ಯೂಬ್ ಸೇರಿದಂತೆ ವಿವಿಧ ಮಾಹಿತಿ ಕಲೆ ಹಾಕಿದ್ದೆ. ಅದರ ಮಾಹಿತಿ ಮೇಲೆ ಕೇದಾರನಾಥ ಪ್ರತಿಕೃತಿ ನಿರ್ಮಿಸಲಾಗಿದೆ. ಈ ರೀತಿ ವಿಶೇಷ ಅಲಂಕಾರ ಮಾಡುವುದರಿಂದ ನಮಗೆ ಒಳ್ಳೆಯದಾಗಿದೆ. ದಿನದಿಂದ ದಿನಕ್ಕೆ ನಮ್ಮ ವ್ಯಾಪಾರ ಆರೋಗ್ಯ ಸೇರಿದಂತೆ ವಿವಿಧ ಶುಭಕಾರ್ಯಗಳ ಸಂಖ್ಯೆ ಅಧಿಕವಾಗಿದೆ" ಎನ್ನುತ್ತಾರೆ ದೀಪಾ.

ಇದನ್ನೂ ಓದಿ:ಉಡುಪಿಯಲ್ಲಿದೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ: ಕುಂಭಾಸುರನ ನಾಶಕ್ಕಾಗಿ ಭೀಮನಿಗೆ ಖಡ್ಗವನಿಟ್ಟ ಗಣಪ! - Anegudde Sri Vinayaka Temple

Last Updated : Sep 10, 2024, 2:49 PM IST

ABOUT THE AUTHOR

...view details