ಜಿ.ಟಿ. ದೇವೇಗೌಡ (ETV Bharat) ಮೈಸೂರು: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಹಾಲಿ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಒತ್ತಾಯಿಸಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಯಾರನ್ನು A1 ಮಾಡಬೇಕು, ಯಾರನ್ನು A2 ಮಾಡಬೇಕು ಎಂಬ ಷಡ್ಯಂತ್ರ ನಡೆಯುತ್ತಿದೆ ಎಂದು ದೂರಿದರು.
ಸಿಬಿಐ ತನಿಖೆಗೆ ಕಾಂಗ್ರೆಸ್ ಒಪ್ಪುವುದಿಲ್ಲ. ಹೀಗಾಗಿ ನ್ಯಾಯಾಧೀಶರಿಂದಲೇ ಪ್ರಕರಣದ ತನಿಖೆ ನಡೆಸಬೇಕು. ಈ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಅವರು ತಪ್ಪಿಸ್ಥರಾಗಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಈ ಕೂಡಲೇ ಡಿಸಿಎಂ ಸಚಿವ ಸಂಪುಟಕ್ಕೆ ರಾಜೀನಾಮೆ ಕೊಡಬೇಕು. ಇಲ್ಲದೇ ಇದ್ದರೆ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ನಾವು ಆಗ್ರಹಿಸುತ್ತೇನೆ ಎಂದರು.
ಈಗಾಗಲೇ ಜೆಡಿಎಸ್ನಿಂದ ಪ್ರಜ್ವಲ್ ರೇವಣ್ಣ ಅವರನ್ನ ಅಮಾನತು ಮಾಡಲಾಗಿದೆ. ಜೊತೆಗೆ ಕುಮಾರಸ್ವಾಮಿ ಅವರೇ ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಹೇಳಿದ್ದಾರೆ. ಆದರೆ ಪೆನ್ ಡ್ರೈವ್ ಪ್ರಕರಣದಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನ ಎಳೆದು ತರುವುದು ಸರಿಯಲ್ಲ. ಈ ತನಿಖೆಯನ್ನು ಎಸ್ಐಟಿ ಸಮರ್ಪಕವಾಗಿ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿದರು.
ಈ ವಿಡಿಯೋಗಳನ್ನ ಯಾವುದೇ ಕಾರಣಕ್ಕೂ ಹಂಚಬಾರದು ಎಂಬ ಬಗ್ಗೆ ತಡೆಯಾಜ್ಞೆ ಇದ್ದರೂ, ಜೊತೆಗೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಪೆನ್ ಡ್ರೈವ್ ಹಂಚಿಕೆಯಾಗಿದೆ. ಈ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿಲ್ಲ. ಕಿಡ್ನಾಪ್ ಕೇಸ್ನಲ್ಲಿ ಹೆಚ್.ಡಿ. ರೇವಣ್ಣ ಅವರನ್ನು ಬಂಧಿಸಿರುವುದು ಸರ್ಕಾರದ ಕುಮ್ಮಕ್ಕುನಿಂದಲೇ. ಪೆನ್ ಡ್ರೈವ್ ಹಿಂದೆ ಇರುವ ಮಹಾ ನಾಯಕರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಬುಧವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಸಂತ್ರಸ್ತೆಯನ್ನ ತೋಟದ ಮನೆಯಲ್ಲಿ ರಕ್ಷಿಸಿಲ್ಲ: ಮತ್ತೊಂದೆಡೆ, ಶಾಸಕ ಸಾರಾ ಮಹೇಶ್ ಮಾತನಾಡಿ, ಹೆಚ್.ಡಿ ರೇವಣ್ಣ ವಿರುದ್ಧ ದಾಖಲಾದ ಅಪಹರಣ ಪ್ರಕರಣದ ಸಂತ್ರಸ್ತೆಯನ್ನು ಹುಣಸೂರು ಬಳಿಯ ತೋಟದ ಮನೆಯಲ್ಲಿ ರಕ್ಷಣೆ ಮಾಡಿಲ್ಲ. ಬದಲಾಗಿ ಹುಣಸೂರು ಪಟ್ಟಣದ ಸಂತ್ರಸ್ತೆಯ ಸಂಬಂಧಿಕರ ಮನೆಯಿಂದ ಆಕೆಯನ್ನು ಎಸ್ಐಟಿ ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಸಂತ್ರಸ್ತೆ ರಕ್ಷಣೆ ಎಲ್ಲಿ ಮಾಡಲಾಗಿದೆ ಎಂಬುದರ ಬಗ್ಗೆ ವಿಡಿಯೋ ಇದ್ದರೆ ಬಿಡುಗಡೆ ಮಾಡಲಿ. ಎಸ್ಐಟಿಯಲ್ಲಿರುವ ಕೆಲವು ಅಧಿಕಾರಿಗಳು ಕಾಂಗ್ರೆಸ್ನ ಕೈ ಗೊಂಬೆಗಳಾಗಿ ಕೆಲಸ ಮಾಡುತ್ತಿದ್ದಾರೆ. ಸಂತ್ರಸ್ತೆ ಅಪಹರಣ ಪ್ರಕರಣ ದಾಖಲು ಮಾಡಿರುವುದರ ಹಿಂದೆ ಹಲವರ ಕೈವಾಡ ಇದೆ. ಇದನ್ನು ತನಿಖೆಯಿಂದ ಬಹಿರಂಗಗೊಳಿಸಲಿ. ಸಂತ್ರಸ್ತೆಯನ್ನ ತೋಟದ ಮನೆಯಿಂದ ರಕ್ಷಣೆ ಮಾಡಿರುವ ಬಗ್ಗೆ ಸಾಕ್ಷ್ಯ ನೀಡಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದರು.
ಇದನ್ನೂ ಓದಿ:25 ಸಾವಿರ ಪೆನ್ಡ್ರೈವ್ ಹಂಚಿಕೆ: ಸಿಬಿಐ ತನಿಖೆಗೆ ಹೆಚ್ ಡಿಕೆ ಆಗ್ರಹ - HDK Press Meet