ಬೆಂಗಳೂರು:ಸರ್ಕಾರ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತದೆ ಎಂದಾಗ ಕೇಂದ್ರ ಸರ್ಕಾರ ಸಿಎಂ ಅವರನ್ನು ಕರೆದು ಮಾತನಾಡಬಹುದಿತ್ತಲ್ಲ? ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಸದಾಶಿವನಗರದ ತಮ್ಮ ನಿವಾಸದಲ್ಲಿ ಇಂದು ಮಾತನಾಡಿದ ಅವರು, ನಾವು ಪ್ರತಿಭಟನೆ ಮಾಡ್ತೇವೆ ಅಂದೆವು. ಆಗ ಸಿಎಂರನ್ನು ಕರೆದು ಕೇಂದ್ರ ಸರ್ಕಾರ ಮಾತನಾಡಬಹುದಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೇನು ಮಾಡಬೇಕು ಹೇಳಿ?. ಕರ್ನಾಟಕಕ್ಕೆ ಹಣ ಕೊಡಬಾರದು ಅಂತ ತೀರ್ಮಾನಿಸಿದ್ದಾರಾ?. ಪೊಲಿಟಿಕಲಿ ಏನು ಬೇಕಾದ್ರೂ ಹೇಳಬಹುದು. ರಾಜ್ಯ ಸರ್ಕಾರಕ್ಕೆ ಹಣ ಕೊಟ್ಟಿದ್ದೇವೆ ಅಂತಾರೆ. ನಾವು ಸುಳ್ಳು ಹೇಳಲು ಆಗುತ್ತಾ?. ಸರ್ಕಾರವೊಂದು ದೆಹಲಿಗೆ ಹೋಗಿ ಪ್ರತಿಭಟನೆ ಮಾಡುತ್ತೆ ಅಂದಾಗ ಅದನ್ನು ಅವರೂ ಯೋಚನೆ ಮಾಡಬೇಕು" ಎಂದು ಹೇಳಿದರು.
ಸತ್ಯಕ್ಕೆ ದೂರವಾದುದನ್ನು ಹೇಳೋಕೆ ಆಗುತ್ತಾ?. ನಮಗೆ ಹಣ ಬಂದಿಲ್ಲ, ಇದು ವಸ್ತುಸ್ಥಿತಿ. 18 ಸಾವಿರ ಕೋಟಿ ರೂ ಬೇಡಿಕೆ ಇಟ್ಟಿದ್ದೇವೆ. ನಾವು ಇಟ್ಟ ಬೇಡಿಕೆ ಕೊಟ್ಟಿದ್ದೀರಾ?. ಜಿಎಸ್ಟಿ ನಮ್ಮ ಪಾಲು ಎಷ್ಟು ಬರಬೇಕು ಅನ್ನೋದನ್ನು ಕೇಂದ್ರದವರೇ ಹೇಳಲಿ. ನಿರ್ಮಲಾ ಸೀತಾರಾಮನ್ ಅವರ ಮೇಲೆ ಗೌರವ ಇದೆ. ಅವರು ಹೇಳುವ ಮಾತು ಸಮಂಜಸವಲ್ಲ. ನಾವು ಕಟ್ಟಿರುವ ಜಿಎಸ್ಟಿ ಪಾಲು ಎಷ್ಟು?. ನೀವು ಎಷ್ಟು ಕೊಟ್ಟಿದ್ದೀರಾ? ಅಷ್ಟು ಹೇಳಿ ಸಾಕು ಎಂದರು.
ಬಿಜೆಪಿಯವರೂ ಪ್ರತಿಭಟನೆಗೆ ಬಂದ್ರೆ ಒಳ್ಳೆದು: ಸಂಸದರಿಗೆ ಸಿಎಂ ಪತ್ರ ಬರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ನಾವು ಎಲ್ಲರನ್ನೂ ಪ್ರತಿಭಟನೆಗೆ ಕರೆದಿದ್ದೇವೆ. ಇದು ರಾಜ್ಯದ ಸಮಸ್ಯೆ, ಕಾಂಗ್ರೆಸ್ ಸಮಸ್ಯೆ ಅಲ್ಲ. ನಮ್ಮ ಸಮಸ್ಯೆಯಾದರೆ ಕೆಪಿಸಿಸಿ ಎದುರು ಧರಣಿ ಮಾಡ್ತೇವೆ. ಬಿಜೆಪಿಯವರೂ ಪ್ರತಿಭಟನೆಗೆ ಬಂದ್ರೆ ಒಳ್ಳೆಯದು ಎಂದು ತಿಳಿಸಿದರು.