ಕರ್ನಾಟಕ

karnataka

ETV Bharat / state

ಕೋಲಾರ: ಮುರುಡೇಶ್ವರದಲ್ಲಿ ಮೃತಪಟ್ಟ ವಿದ್ಯಾರ್ಥಿನಿಯರ ಅಂತ್ಯಸಂಸ್ಕಾರ, ಪೋಷಕರ ಆಕ್ರಂದನ - MURUDESHWARA BEACH TRAGEDY

ಕೋಲಾರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಮುರುಡೇಶ್ವರದಲ್ಲಿ ಸಮುದ್ರದಲೆಗಳ ಹೊಡೆತಕ್ಕೆ ಸಿಲುಕಿ ಸಾವನ್ನಪ್ಪಿದ್ದು, ಇಂದು ಅವರ ಅಂತ್ಯಸಂಸ್ಕಾರ ನಡೆಯಿತು.

dead-students-funeral-in-kolara
ವಿದ್ಯಾರ್ಥಿಗಳ ಮೃತದೇಹದ ಅಂತ್ಯಸಂಸ್ಕಾರ (ETV Bharat)

By ETV Bharat Karnataka Team

Published : Dec 12, 2024, 10:47 PM IST

ಕೋಲಾರ:ಮುರುಡೇಶ್ವರದ ಸಮುದ್ರದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿನಿಯರ ಮೃತದೇಹಗಳ ಅಂತ್ಯಸಂಸ್ಕಾರ ಗುರುವಾರ ಕೋಲಾರದ ಅವರ ಹುಟ್ಟೂರಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಕ್ಕಳ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮನಕಲಕುವಂತಿತ್ತು. ವಿದ್ಯಾರ್ಥಿನಿಯರನ್ನು ಕಳೆದುಕೊಂಡ ಊರಲ್ಲಿ ಸ್ಮಶಾನ ಮೌನ ಆವರಿಸಿದೆ.

ಕಳೆದ ಮಂಗಳವಾರ ಶೈಕ್ಷಣಿಕ ಪ್ರವಾಸಕ್ಕೆ ಸಹಪಾಠಿಗಳೊಂದಿಗೆ ಮುರುಡೇಶ್ವರಕ್ಕೆ ತೆರಳಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರಲ್ಲಿ ನಾಲ್ವರು ದುರಂತ ಅಂತ್ಯ ಕಂಡಿದ್ದರು. 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿವರ್ಷದಂತೆ ಈ ಸಲವೂ ಪ್ರವಾಸ ಆಯೋಜಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ವಿವಿಧ ಸ್ಥಳಗಳಿಗೆ ಕರೆದುಕೊಂಡು ಹೋಗಲಾಗಿತ್ತು. ಪ್ರವಾಸದ ಅಂತಿಮ ಸ್ಥಳವಾಗಿದ್ದ ಮುರುಡೇಶ್ವರ ಸಮುದ್ರದ ಬಳಿ ವಿದ್ಯಾರ್ಥಿಗಳು ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದಾಗಲೇ ಜವರಾಯ ಅಟ್ಟಹಾಸ ಮೆರೆದಿದ್ದ.

ಆಟವಾಡುತ್ತಾ ಸಮುದ್ರ ಸೇರಿದ ಬಾಲೆಯರು:ಸಹಪಾಠಿಗಳೊಂದಿಗೆ ಆಟವಾಡುತ್ತಿರುವಾಗ ಬೃಹತ್ ಅಲೆಗಳ ರೂಪದಲ್ಲಿ ಬಂದ ಅಪಾಯ, 7 ಮಂದಿ ವಿದ್ಯಾರ್ಥಿನಿಯರನ್ನು ಸಮುದ್ರದತ್ತ ಸೆಳೆದುಕೊಂಡಿತ್ತು. ಸಮುದ್ರದ ಬಗ್ಗೆ ಅರಿವಿಲ್ಲದ ವಿದ್ಯಾರ್ಥಿನಿಯರು ಆಟವಾಡುತ್ತಾ ಬೃಹತ್ ಅಲೆಗಳ ಸೆಳೆತಕ್ಕೆ ಸಿಲುಕಿದ್ದರು. ಏಳು ಮಂದಿ ಬಾಲಕಿಯರಲ್ಲಿ ಮೂವರನ್ನು ತಕ್ಷಣ ಸ್ಥಳೀಯ ಮೀನುಗಾರರು ಮತ್ತು ಸಿಬ್ಬಂದಿ ರಕ್ಷಿಸಿದ್ದರು. ಆದರೆ ಇನ್ನುಳಿದ ನಾಲ್ವರನ್ನು ರಕ್ಷಿಸಲಾಗದೆ ಮೃತರಾಗಿದ್ದರು.

ಘಟನೆ ನಡೆದ ಮಂಗಳವಾರ ಸಂಜೆಯೇ ಒರ್ವ ಬಾಲಕಿಯ ಶವ ಸಿಕ್ಕಿತ್ತು. ಆದರೆ ಇನ್ನುಳಿದ ಮೂವರ ಶವಗಳು ಬುಧವಾರ ಪತ್ತೆಯಾಗಿದ್ದು, ಗುರುವಾರ ಕೋಲಾರಕ್ಕೆ ತಲುಪಿದ್ದವು. ಬೆಳಗ್ಗೆ 8.30ರ ವೇಳೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಅಂತಿಮ‌ ನಮನದ ನಂತರ, ಸ್ವಗ್ರಾಮಗಳಲ್ಲಿ ಬಾಲಕಿಯರ ಅಂತಿಮ ಸಂಸ್ಕಾರ ಜರುಗಿದೆ. ಕೋಲಾರ ಜಿಲ್ಲಾಧಿಕಾರಿ ಮತ್ತು ಕ್ರೈಸ್ ಸಂಸ್ಥೆ ಸಿಇಒ ಸೇರಿದಂತೆ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.

ಡಾಕ್ಟರ್ ಆಗುವ ಕನಸು ಕಂಡಿದ್ದ ಬಾಲಕಿ:ನಾಲ್ವರು ಬಾಲಕಿಯರಲ್ಲಿ ಓರ್ವಳು ದೊಡ್ಡಗುಟ್ಟಹಳ್ಳಿ ಗ್ರಾಮದ ಮುನಿರಾಜು ಅವರ ಪುತ್ರಿ ವಂದನಾ. ಮುನಿರಾಜುಗೆ ಮೂವರು ಮಕ್ಕಳಿದ್ದು, ವಂದನಾ ಎರಡನೇ ಪುತ್ರಿಯಾಗಿದ್ದಳು. ಚೆನ್ನಾಗಿ ಓದಿ ಡಾಕ್ಟರ್ ಆಗಬೇಕೆಂದು ಕನಸು ಕಂಡಿದ್ದಳು. ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಕಷ್ಟದಲ್ಲಿದ್ದರೂ ಕೂಡ ಓದಿನಲ್ಲಿ ಬುದ್ದಿವಂತೆಯಾದ್ದ ವಂದನಾ ಇರುವ ಅಲ್ಪ ಹಣದಲ್ಲೇ ಓದನ್ನು ಮುಂದುವರೆಸಿದ್ದಳು ಎಂದು ಆಕೆಯ ಸಹೋದರಿ ಕಣ್ಣೀರಿಟ್ಟರು. ತಂದೆಯೂ ವಿಕಲಚೇತನರಾಗಿದ್ದು, ಇನ್ನೋರ್ವ ಸಹೋದರಿ ಡಿಪ್ಲೋಮಾ ಮಾಡಿದ್ದಾಳೆ, ಅವಳಿಗೊಂದು ಸರ್ಕಾರಿ ಕೆಲಸ ಕೊಡಿ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಇತ್ತ ಮತ್ತೋರ್ವ ಬಾಲಕಿಯ ಶ್ರಾವಂತಿ ಮನೆಯ ಪರಿಸ್ಥಿತಿಯೂ ಕೂಡ ಇದಕ್ಕೆ ಹೊರತಾಗಿಲ್ಲ. ಮೊರಾರ್ಜಿ ದೇಸಾಯಿ ಶಾಲೆಯ ಕೂಗಳತೆ ದೂರದಲ್ಲೇ ಇರುವ ಪೂಜಾರಹಳ್ಳಿ ಗ್ರಾಮದ ಇವರ ಮನೆಯಲ್ಲೂ ಕೂಡ ಕಡುಬಡತನ. ಮನೆಯಿಂದ ಅಲ್ಪ ದೂರದಲ್ಲಿಯೇ ಇದ್ದ ಶ್ರಾವಂತಿ, ರಜೆ ದಿನದಲ್ಲಿ ಮಾತ್ರ ಊರಿಗೆ ಬರುತ್ತಿದ್ದಳು. ಓದಿನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದವಳು ಬಾರದ ಲೋಕಕ್ಕೆ ತೆರಳಿದ್ದಾಳೆ.

ಇನ್ನುಳಿದಂತೆ, ಎನ್.ಗಡ್ಡೂರು ಗ್ರಾಮದ ದೀಕ್ಷಾ ಅಂತಿಮ ದರ್ಶನದ ನಂತರ ಆಕೆಯ ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರಕ್ಕೆ ಮೃತದೇಹವನ್ನು ಪೋಷಕರು ಆಂದ್ರಕ್ಕೆ ರವಾನಿಸಿದರು. ಇನ್ನೊಂದೆಡೆ, ಹೆಬ್ಬಣಿ ಗ್ರಾಮದ ಲಾವಣ್ಯ ಅಂತ್ಯಸಂಸ್ಕಾರವೂ ನೆರವೇರಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಪರಿಹಾರ ವಿತರಣೆ:ಮೃತರ ಕುಟುಂಬಗಳಿಗೆ ಸರ್ಕಾರ ಘೋಷಿಸಿದ್ದ ತಲಾ 5 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಜಿಲ್ಲಾಧಿಕಾರಿ ಅಕ್ರಂ ಪಾಷ ಹಸ್ತಾಂತರ ಮಾಡಿದರು. ದುರಂತದ ಹಿನ್ನೆಲೆಯಲ್ಲಿ ವಸತಿ ಶಾಲೆಯ ಪ್ರಾಂಶುಪಾಲೆ ಶಶಿಕಲಾ ಅವರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಪ್ರವಾಸಕ್ಕೆ ಹೋಗಿದ್ದ 46 ಮಂದಿಯಲ್ಲಿ ನಾಲ್ವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಉಳಿದವರು ಸರ್ಕಾರಿ ಬಸ್​​ನಲ್ಲಿ ವಾಪಸ್ ಆಗಿದ್ದರು.

ಇದನ್ನೂ ಓದಿ:ಸಮುದ್ರ ಪಾಲಾದ ಮೂವರು ವಿದ್ಯಾರ್ಥಿನಿಯರ ಮೃತದೇಹಗಳು ಪತ್ತೆ: ಸಿಎಂ ಪರಿಹಾರ ಘೋಷಣೆ - MURUDESHWAR TRAGEDY

ABOUT THE AUTHOR

...view details