ಬೆಳಗಾವಿ: ಉತ್ತರಪ್ರದೇಶದ ಪ್ರಯಾಗ್‌ರಾಜ್ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಬೆಳಗಾವಿಯ ಜ್ಯೋತಿ ಹತ್ತರವಾಟ ಮತ್ತು ಅವರ ಪುತ್ರಿ ಮೇಘಾ ಅವರ ಅಂತ್ಯಸಂಸ್ಕಾರ ಶಹಾಪುರ ಸ್ಮಶಾನದಲ್ಲಿ ಶುಕ್ರವಾರ ಬೆಳಗ್ಗೆ ನೆರವೇರಿತು. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದರೆ, ಅವರ ಮನೆಯ ನಾಯಿಯ ಗೋಳಾಟ ನೆರೆದವರ ಕಣ್ಣಲ್ಲಿ ನೀರು ತರಿಸಿತು. ಅವರ ನೆಚ್ಚಿನ ಶ್ವಾನವೂ ಇಬ್ಬರ ಶವದ ಮುಂದೆ ನಿಂತು ಗೋಗರೆಯಿತು. ಅವರು ತೀರಿಕೊಂಡ ಸುದ್ದಿ ತಿಳಿದಾಗಿನಿಂದ ನಾಯಿ ಮೌನಕ್ಕೆ ಶರಣಾಗಿತ್ತು.
ತಡರಾತ್ರಿ ಪಾರ್ಥಿವ ಶರೀರಗಳನ್ನ ಬರಮಾಡಿಕೊಂಡ ಜಿಲ್ಲಾಧಿಕಾರಿ:ಬ್ರಾಹ್ಮಣ ಸಂಪ್ರದಾಯದಂತೆ ವಿಧಿ - ವಿಧಾನಗಳನ್ನು ಪೂರೈಸಲಾಯಿತು. ಜ್ಯೋತಿ ಅವರ ಪತಿ ದೀಪಕ್ ಅವರು ಇಬ್ಬರ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಜ್ಯೋತಿ ಹಾಗೂ ಮೇಘಾ ಅವರ ಶವಗಳನ್ನು ದೆಹಲಿಯಿಂದ ಗೋವಾಗೆ ಏರ್ ಲಿಫ್ಟ್ ಮಾಡಿ, ಅಲ್ಲಿಂದ ಆಂಬ್ಯುಲೆನ್ಸ್ ಮೂಲಕ ಬೆಳಗಾವಿಗೆ ತರಲಾಯಿತು. ನಿನ್ನೆ ತಡರಾತ್ರಿ 12.30ರ ಸುಮಾರಿಗೆ ಬೆಳಗಾವಿಗೆ ಬಂದ ಇಬ್ಬರ ಶವಗಳನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬರಮಾಡಿಕೊಂಡು ಗೌರವ ನಮನ ಸಲ್ಲಿಸಿದರು.
ನಸುಕಿನ ಜಾವದಲ್ಲೇ ಸೇರಿದ ಅಪಾರ ಜನಸಮೂಹ:ಶುಕ್ರವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು. ಪುಣ್ಯಸ್ನಾನಕ್ಕೆ ಹೋದ ತಾಯಿ, ಮಗಳು ಶವವಾಗಿ ಬಂದಿದ್ದು ಕಂಡು ಕುಟುಂಬದವರು ದುಃಖದಲ್ಲಿ ಮುಳುಗಿದ್ದರು. ನಸುಕಿನ ಜಾವದಲ್ಲೂ ಅಪಾರ ಜನರು ಸೇರಿ ಅಂತಿಮ ನಮನ ಸಲ್ಲಿಸಿದರು. ನಂತರ ಶಹಾಪುರದಲ್ಲಿ ಅಗ್ನಿಸ್ಪರ್ಶ ಮಾಡಲಾಯಿತು.