ಮಂಗಳೂರು:''ಮಹಾತ್ಮ ಗಾಂಧೀಜಿ ಅವರು ಮೂರು ಬಾರಿ ಭೇಟಿ ನೀಡಿರುವ ಮಂಗಳೂರಿನಲ್ಲಿ ಇಂದು ಮೂಲಭೂತವಾದ ವಿಜೃಂಭಿಸುತ್ತಿದೆ. ಗಾಂಧಿಯನ್ನು ಹತ್ಯೆ ಮಾಡಿದವರ ಸಿದ್ಧಾಂತಗಳು ಇಲ್ಲಿ ಮೆರೆಯುವ ಮೂಲಕ ಗಾಂಧಿ ಸಂದೇಶಗಳು ಮರೆಯಾಗಿರುವುದು ನಾಚಿಕೆಗೇಡಿನ ವಿಚಾರ'' ಎಂದು ಮಹಾತ್ಮ ಗಾಂಧೀಜಿಯವರ ಮರಿಮೊಮ್ಮಗ, ಸಾಮಾಜಿಕ ಚಿಂತಕ ತುಷಾರ್ ಗಾಂಧಿ ಹೇಳಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ, ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನ ಕಜೆಮಾರು ಕೆದಂಬಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ವಿಚಾರ ಸಂಕಿರಣ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು 'ಇಂದಿನ ಯುವಜನತೆಗೆ ಗಾಂಧಿ ವಿಚಾರಧಾರೆಯ ಪ್ರಸ್ತುತತೆ' ಬಗ್ಗೆ ಮಾತನಾಡಿದರು.
ಕಾಂಗ್ರೆಸ್‌ನಲ್ಲಿ ಏಕತೆ ಕಾಣದಿರುವುದು ದುರದೃಷ್ಟಕರ: ''ಗಾಂಧೀಜಿ ಅವರು ವ್ಯಕ್ತಿಯಾಗಿ ಸಾವಿನ ಬಳಿಕ ಗುರುತಿಸಲ್ಪಡುತ್ತಿಲ್ಲ. ಬದಲಾಗಿ ಅವರ ಬದುಕಿನ ತತ್ವಗಳು ಇಂದಿಗೂ ಬದುಕುಳಿದು, ಜಾಗತಿಕವಾಗಿ ಗೌರವಿಸಲ್ಪಡುತ್ತಿದೆ. ಭಾರತವು ವಿಭಿನ್ನ ಧರ್ಮಗಳಿಂದ ಕೂಡಿದ ರಾಷ್ಟ್ರ. ಪ್ರತಿ ಧರ್ಮವೂ ಅದರದ್ದೇ ಆದ ಮಹತ್ವ ಹೊಂದಿವೆ. ಈ ಧಾರ್ಮಿಕ ಆಚರಣೆ ನಮ್ಮ ಮನೆಗಳಿಗೆ ಸೀಮಿತವಾಗಿರಲಿ. ಅದನ್ನು ಬೀದಿಗೆ ತರುವುದು ಬೇಡ. ಅದಕ್ಕಾಗಿಯೇ ಜಾತಿ, ಧರ್ಮಗಳ ಮೇಲ್ಮೆಯನ್ನು ಪ್ರತಿಬಿಂಬಿಸುವ ನಮ್ಮ ಸಂಕೇತಗಳಿಂದ ನಮ್ಮ ಒಗ್ಗಟ್ಟಿಗೆ ಅಪಚಾರ ಆಗಬಾರದು ಎಂಬ ನೆಲೆಯಲ್ಲಿ ಸಮಾನತೆ ಸಾರಲು ಬಿಳಿ ಟೋಪಿಯನ್ನು ಕಾಂಗ್ರೆಸ್ಸಿಗರು ಧರಿಸುವುದನ್ನು ರೂಢಿಸಿದ್ದರು. ಆದರೆ, ಇಂದು ಕಾಂಗ್ರೆಸ್‌ನಲ್ಲಿ ಆ ಏಕತೆ ಕಾಣದಿರುವುದು ದುರದೃಷ್ಟಕರವಾಗಿದೆ'' ಎಂದರು.
''ಸ್ವಾತಂತ್ರ್ಯ ನಂತರದ 78 ವರ್ಷಗಳಲ್ಲಿ ರಾಜಕೀಯ ವ್ಯವಸ್ಥೆಯು ನಮ್ಮ ಸಮಾಜವನ್ನು ಮತ್ತೆ ಜಾತಿ, ಧರ್ಮ, ದ್ವೇಷ ಮತ್ತು ಮೂಲಭೂತವಾದದ ಮೂಲಕ ಪ್ರತ್ಯೇಕಿಸಲು ಪ್ರಯತ್ನಿಸುತ್ತಿದೆ. ಇಂತಹ ಸಮಾಜವನ್ನು ವಿಭಜಿಸುವ ಮನಸ್ಥಿತಿಯವರು ದೇಶದ್ರೋಹಿಗಳು. ಅವರು ಸಂವಿಧಾನದ ಬಗ್ಗೆ ನಂಬಿಕೆ ಇಲ್ಲದವರು'' ಎಂದು ಹೇಳಿದರು.