ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಅವರ ಡೀಪ್ ಫೇಕ್ ವಿಡಿಯೋ, ಫೋಟೋ ಸೃಷ್ಟಿಸಿ ವಂಚಕರು ಲಕ್ಷಾಂತರ ರೂಪಾಯಿ ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ನಾರಾಯಣಮೂರ್ತಿ ಡೀಪ್ ಫೇಕ್ ಬಳಸಿ 6.71 ಲಕ್ಷ ವಂಚನೆ:ಎಫ್ಎಕ್ಸ್ ರೋಡ್ ಪ್ಲಾಟ್ಫಾರ್ಮ್ ಟ್ರೇಡಿಂಗ್ ಬಗ್ಗೆ ನಾರಾಯಣಮೂರ್ತಿ ಅವರು ಮಾಹಿತಿ ನೀಡಿದಂತೆ ವಂಚಕರು ಡೀಪ್ ಫೇಕ್ ವಿಡಿಯೋ ಸೃಷ್ಟಿಸಿ, ಅದನ್ನು ವೀಣಾ ಎಂಬುವರಿಗೆ ಇ - ಮೇಲ್ ಮೂಲಕ ಕಳುಹಿಸಿದ್ದಾರೆ. ನಂತರ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭಾಂಶ ಸಿಗುತ್ತದೆ ಎಂದು ನಂಬಿಸಿ ಮಹಿಳೆಯಿಂದ ಮೊದಲು 1.39 ಲಕ್ಷ ಹಣ ವರ್ಗಾಯಿಸಿಕೊಂಡು ಅದಕ್ಕೆ ಪ್ರತಿಯಾಗಿ 8 ಸಾವಿರ ಲಾಭ ನೀಡಿದ್ದಾರೆ. ಇದೇ ರೀತಿ ಹಂತ - ಹಂತವಾಗಿ 6.71 ಲಕ್ಷ ಹಣ ವರ್ಗಾಯಿಸಿಕೊಂಡು ಬಳಿಕ ವಂಚಿಸಿದ್ದಾರೆ.
ಮತ್ತೆ 57 ಲಕ್ಷ ವಂಚನೆಗೊಳಗಾದ ಮಹಿಳೆ:ಇದಾದ ಕೆಲ ದಿನಗಳ ಬಳಿಕ ವರ್ಕ್ ಫ್ರಮ್ ಹೋಮ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದ ಲಿಂಕ್ ಒತ್ತಿದ ಇದೇ ಮಹಿಳೆಗೆ ಟೆಲಿಗ್ರಾಮ್ ಮೂಲಕ ಸಂಪರ್ಕಿಸಿದ ವಂಚಕರು, ಎಎಸ್ಒಎಸ್ ಪ್ಲಾಟ್ಫಾರ್ಮ್ನಲ್ಲಿ ಪ್ರಾಡಕ್ಟ್ಗಳಿಗೆ ರೇಟಿಂಗ್ ನೀಡಿ ಹಣ ಸಂಪಾದಿಸಬಹುದು ಎಂದು ಹೇಳಿ ಆರಂಭದಲ್ಲಿ ಲಾಭಾಂಶ ನೀಡಿ ಬಳಿಕ ಮಹಿಳೆಗೆ 57 ಲಕ್ಷ ವಂಚಿಸಿದ್ದಾರೆ. ಈ ಎರಡು ಪ್ರಕರಣದ ಸಂಬಂಧ ಸೆನ್ ಪೊಲೀಸ್ ಠಾಣೆಗೆ ವಂಚನೆಗೊಳಗಾದ ಮಹಿಳೆ ದೂರು ನೀಡಿದ್ದಾರೆ.
ಅಂಬಾನಿ ಡೀಪ್ ಫೇಕ್ ಫೋಟೋ ಬಳಸಿ ವಂಚನೆ:ಮುಖೇಶ್ ಅಂಬಾನಿಯ ಡೀಪ್ ಫೇಕ್ ಫೋಟೋ ಬಳಿಸಿದ ವಂಚಕರು, ಸಾಮಾಜಿಕ ಮಾಧ್ಯಮದ ಮೂಲಕ ಲಿಂಕ್ ಅಶೋಕ್ ಕುಮಾರ್ ಎಂಬುವರಿಗೆ ಲಿಂಕ್ ಕಳುಹಿಸಿ ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ ಎಂದು ಹೇಳಿದ್ದಾರೆ. ಇದನ್ನು ನಂಬಿ ಅಶೋಕ್ ಹಂತ-ಹಂತವಾಗಿ 19 ಲಕ್ಷ ಹಣವನ್ನು ವಂಚಕರಿಗೆ ವರ್ಗಾಯಿಸಿದ್ದರು. ನಂತರ ವಂಚಕರು ಯಾವುದೇ ಲಾಭಾಂಶ ನೀಡದೆ 19 ಲಕ್ಷ ವಂಚಿಸಿದ್ದಾರೆ. ಈ ಸಂಬಂಧ ಬೆಂಗಳೂರು ಗ್ರಾಮಾಂತರ ಸೆನ್ ಪೊಲೀಸ್ ಠಾಣೆಗೆ ಅಶೋಕ್ ದೂರು ಕೊಟ್ಟಿದ್ದಾರೆ.
ಇದನ್ನೂ ಓದಿ:ಆರ್ಡರ್ ನೆಪದಲ್ಲಿ ಅಮೆಜಾನ್ ಸಂಸ್ಥೆಗೆ 11.45 ಲಕ್ಷ ರೂ. ವಂಚನೆ: ಆರೋಪಿಗಳ ಬಂಧನ