ದಾವಣಗೆರೆ:ಫೋನ್ ಪೇ ಕಸ್ಟಮರ್ ಸೋಗಿನಲ್ಲಿ ರಿವ್ಯೂ ಕೇಳಿದ ಅಪರಿಚಿತರು ಲಿಂಕ್ ಮೂಲಕ ವ್ಯಕ್ತಿಯೊಬ್ಬನಿಗೆ ಲಕ್ಷ-ಲಕ್ಷ ಹಣ ವಂಚಿಸಿದ್ದಾರೆ.
ಸಂಪೂರ್ಣ ವಿವರ: ಆಗಸ್ಟ್ 06ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಂಚನೆಗೊಳಗಾದ ವ್ಯಕ್ತಿ ಬಗೆಗಿನ ಮಾಹಿತಿ ಬಗ್ಗೆ ಪೊಲೀಸರು ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಫೋನ್ ಪೇ ರಿವ್ಯೂ ಕೊಟ್ಟ ತಕ್ಷಣ ಒಟ್ಟು ಆರುವರೆ ಲಕ್ಷ ಹಣ ಅನ್ಲೈನ್ ವಂಚನೆ ಆಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವ್ಯಕ್ತಿಯೊಬ್ಬ ತನ್ನ ಸ್ನೇಹಿತ ಶಿವಣ್ಣ ಎಂಬುವರ ಮೊಬೈಲ್ ಸಂಖ್ಯೆಗೆ ಒಟ್ಟು 98,000 ರೂಪಾಯಿಗಳನ್ನು ಫೋನ್ ಪೇ ಮಾಡಿದ್ದಾರೆ. ಈ ವೇಳೆ ವಹಿವಾಟು ಕಡಿತ ಆಗಿದೆ. ಬಳಿಕ ಕೆಲ ಹೊತ್ತಲ್ಲೇ ಮೋಸ ಹೋದ ವ್ಯಕ್ತಿ ಖಾತೆಯಿಂದ 98 ಸಾವಿರ ಹಣ ಡೆಬಿಟ್ ಆಗಿರುವ ಬಗ್ಗೆ ಮೊಬೈಲ್ಗೆ ಸಂದೇಶ ಬಂದಿದೆ. ಸಂಬಂಧಪಟ್ಟ ಸ್ನೇಹಿತನ ಖಾತೆಗೆ ಹಣ ಹೋಗದ ಸಂಬಂಧ ಮೋಸ ಹೋದ ವ್ಯಕ್ತಿ ಗೂಗಲ್ನಲ್ಲಿ ಫೋನ್ ಪೇ ಕಸ್ಟಮರ್ ಕೇರ್ಗೆ ದೂರವಾಣಿ ಸಂಖ್ಯೆ ಹುಡುಕಿ ಕರೆ ಮಾಡಿದ್ದಾರೆ. ಆಗ ಕಸ್ಟಮರ್ ಕೇರ್ ಸಿಬ್ಬಂದಿಯು ವ್ಯಕ್ತಿಗೆ ಸಂಜೆಯೊಳಗೆ ನಿಮ್ಮ ಹಣ ವಾಪಸ್ ಬರುತ್ತದೆ ಕಾಯಿರಿ ಅಂತಾ ಹೇಳಿದ್ದರು. ಬಳಿಕ ಸಂಜೆ ವೇಳೆಗೆ ಮೋಸ ಹೋದ ವ್ಯಕ್ತಿಯ ಬ್ಯಾಂಕ್ ಖಾತೆಗೆ 98 ಸಾವಿರ ರೂಪಾಯಿ ಹಣ ಜಮಾ ಆಗಿತ್ತು.
ಕರೆ ಮಾಡಿ ರಿವಿವ್ಯೂ ಕೊಡಲು ಹೇಳಿ ವಂಚನೆ:ಆಗಸ್ಟ್ 08ರಂದು ಮೋಸ ಹೋದ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಯಾರೋ ಅಪರಿಚಿತರು ಕರೆ ಮಾಡಿ ಹಿಂದಿ ಭಾಷೆಯಲ್ಲಿ ನಾವು ಫೋನ್ ಪೇ ಕಸ್ಟಮರ್ ಕೇರ್ನಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಫೋನ್ ಪೇ ಸಮಸ್ಯೆ ಬಗೆಹರಿದಿದೆಯಾ ಎಂದು ಕೇಳಿದ್ದಾರೆ. ಆಗ ನಾನು ಹಣ ವಾಪಸ್ ಬಂದಿರುತ್ತದೆ ಅಂತಾ ಹೇಳಿದಾಗ ಅವರು, ನಮ್ಮ ಸೇವೆಗೆ ನಿಮ್ಮ ರಿವ್ಯೂ ಕೊಡಬೇಕು. ನಿಮಗೆ ನಾನು ಒಂದು ಲಿಂಕ್ ಕಳುಹಿಸುತ್ತೇನೆ, ಅದರಲ್ಲಿ ರಿವ್ಯೂ ಕೊಡಿ ಎಂದು ಹೇಳಿ ಪುಸಲಾಯಿಸಿದ್ದಾರೆ.
ಮೋಸ ಹೋದ ವ್ಯಕ್ತಿಯ ವಾಟ್ಸ್ಆ್ಯಪ್ಗೆ ವಂಚಕರು ಲಿಂಕ್ ಕಳಿಸಿದ್ದಾರೆ. ಅದನ್ನು ಒಪನ್ ಮಾಡಿದಾಗ ಒಂದು ಅಪ್ಲಿಕೇಶನ್ ಡೌನ್ಲೋಡ್ ಆಗಿದೆ. ಬಳಿಕ ಅಪ್ಲಿಕೇಶನ್ ಓಪನ್ ಮಾಡಿ ವೇರಿ ಗುಡ್ ಎಂದು ಮೋಸ ಹೋದ ವ್ಯಕ್ತಿ ರಿವ್ಯೂ ಕೊಟ್ಟ ತಕ್ಷಣ ಬ್ಯಾಂಕ್ ಖಾತೆಯಲ್ಲಿದ್ದ ರೂ. 5,00,000 ರೂಪಾಯಿ ಮೊದಲು ಕಡಿತವಾಗಿದೆ. ಬಳಿಕ 1,61,000 ರೂ. ಹಣ ಡೆಬಿಟ್ ಆಗಿದೆ. ಈ ಬಗ್ಗೆ ಮೊಬೈಲ್ಗೆ ಹಣ ಕಟ್ ಆಗಿದ್ದರ ಬಗ್ಗೆ ಸಂದೇಶ ಬಂದಾಗ ತಾನು ಮೋಸ ಹೋಗಿರುವುದು ವ್ಯಕ್ತಿಗೆ ಗೊತ್ತಾಗಿದೆ. ಬಳಿಕ ಸಿಇಎನ್ ಅಪರಾಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:ಇಬ್ಬರು ನಕಲಿ ವೈದ್ಯರಿಗೆ 1 ಲಕ್ಷ ರೂ ದಂಡ, ಮೆಡಿಕಲ್ ಸ್ಟೋರ್ ಮುಚ್ಚಲು ದಾವಣಗೆರೆ ಡಿಸಿ ಆದೇಶ - Fake Doctors