ಮೈಸೂರು:ಮಲಗಿದ್ದಲ್ಲೇ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ನಗರದ ಯರಗನಹಳ್ಳಿಯಲ್ಲಿ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಮೃತರನ್ನು ಯರಗನಹಳ್ಳಿ ನಿವಾಸಿಗಳಾದ ಕುಮಾರಸ್ವಾಮಿ (45) ಮತ್ತು ಮಂಜುಳಾ (39) ದಂಪತಿ ಹಾಗೂ ಮಕ್ಕಳಾದ ಅರ್ಚನಾ (19) ಹಾಗೂ ಸ್ವಾತಿ (17) ಎಂದು ಗುರುತಿಸಲಾಗಿದೆ. ಕುಮಾರಸ್ವಾಮಿ ಅವರು ಬಟ್ಟೆ ಇಸ್ತ್ರಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಮಂಗಳವಾರ ರಾತ್ರಿ ಮನೆಯಲ್ಲಿ ಸಿಲಿಂಡರ್ ಸೋರಿಕೆಯಾಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
ಕುಟುಂಬದ ಹಿನ್ನೆಲೆ:ಮೃತಪಟ್ಟ ನಾಲ್ವರು ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಮೂಲದವರಾಗಿದ್ದು, ಕಳೆದ 30 ವರ್ಷಗಳಿಂದ ಮೈಸೂರಿನ ಯರಗನಹಳ್ಳಿಯಲ್ಲಿ ಚಿಕ್ಕಮನೆಯಲ್ಲಿ ವಾಸವಿದ್ದರು. ಕುಮಾರಸ್ವಾಮಿ ಗ್ಯಾಸ್ ಸಿಲಿಂಡರ್ ಬಳಸಿ ಬಟ್ಟೆ ಇಸ್ತ್ರಿ ಕೆಲಸ ಮಾಡುತ್ತಿದ್ದು, ಇಬ್ಬರು ಮಕ್ಕಳು ಇಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದರು. ಇವರು ಕಡೂರಿನ ಸಖರಾಯಪಟ್ಟಣದ ಸಂಬಂಧಿಕರೊಬ್ಬರ ಮದುವೆ ಮುಗಿಸಿಕೊಂಡು ಭಾನುವಾರ ಮೈಸೂರಿನ ತಮ್ಮ ಮನೆಗೆ ಆಗಮಿಸಿದ್ದರು.
ಫಟನೆ ಬಗ್ಗೆ ಮೃತ ಕುಮಾರಸ್ವಾಮಿ ಅವರ ಸಹೋದರಿ ವೀಣಾಕ್ಷಿ ಮಾತನಾಡಿ, "ನಿನ್ನೆಯಿಂದ ಫೋನ್ ಮಾಡಿದರೂ ಅಣ್ಣನ ಮನೆಯಲ್ಲಿ ಯಾರು ಫೋನ್ ಎತ್ತಲಿಲ್ಲ. ಮಗನಿಗೆ ಮನೆಯ ಹತ್ತಿರ ಹೋಗಿ ಬಾ ಎಂದು ಹೇಳಿದೆ. ಬೆಳಗ್ಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕುಟುಂಬದಲ್ಲಿ ಯಾವುದೇ ಕಲಹ ಇರಲಿಲ್ಲ. ಎಲ್ಲರೂ ಚೆನ್ನಾಗಿದ್ದರು. ಸಖರಾಯಪಟ್ಟಣದಲ್ಲಿ ನಡೆದ ಸಂಬಂಧಿಕರೊಬ್ಬರ ಮದುವೆಗೆ ಹೋಗಿ ಭಾನುವಾರ ರಾತ್ರಿ ಮೈಸೂರಿಗೆ ವಾಪಸ್ ಬಂದಿದ್ದರು. ಸೋಮವಾರ ಚೆನ್ನಾಗಿಯೇ ಇದ್ದರು, ಈಗ ಹೀಗಾಗಿದೆ. ಪೊಲೀಸರು ಮನೆಯಲ್ಲಿ ಗ್ಯಾಸ್ಲೀಕ್ ಆಗಿದೆ ಎಂದು ಹೇಳಿದರು" ಎಂದು ಮಾಹಿತಿ ನೀಡಿದರು.
ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾತನಾಡಿ, "ಮೃತಪಟ್ಟ ನಾಲ್ವರು ಒಂದೇ ಕುಟುಂಬದ ಸದಸ್ಯರಾಗಿದ್ದಾರೆ. ಕುಮಾರಸ್ವಾಮಿ ಇಸ್ತ್ರೀ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಚಿಕ್ಕಮಗಳೂರಿನ ಸಖರಾಯಪಟ್ಟಣದ ಸಂಬಂಧಿಕರೊಬ್ಬರ ಮದುವೆ ಹೋಗಿ ವಾಪಸ್ ಬಂದು ಸೋಮವಾರ ರಾತ್ರಿ ಮನೆಯಲ್ಲೇ ಮಲಗಿದ್ದರು. ಬುಧವಾರ ಬೆಳಗ್ಗೆ ಸಂಬಂಧಿಕರ ಯಾವುದೇ ಫೋನ್ ಕರೆಗಳನ್ನ ಸ್ವೀಕರಿಸುತ್ತಿರಲ್ಲಿಲ್ಲ ಹಾಗೂ ಮನೆಯಿಂದ ಯಾರೂ ಹೊರಗೆ ಬಂದಿರಲಿಲ್ಲ. ಇದರಿಂದ ಗಾಬರಿಯಾದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಕಿಟಕಿಯ ಮೂಲಕ ನೋಡಿದಾಗ ನಾಲ್ವರು ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿರುವುದು ಕಂಡು ಬಂದಿದೆ. ಗಂಡ-ಹೆಂಡತಿ ರೂಮ್ನಲ್ಲಿ ಮತ್ತು ಮಕ್ಕಳು ಹಾಲ್ನಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರು ಎಂದರು.
"ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಸಿಬ್ಬಂದಿ, ಎಫ್ಎಸ್ಐಎಲ್ ತಂಡ ಬಂದು ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಮೂರು ಸಿಲಿಂಡರ್ ಇದ್ದು, ಒಂದು ಸಿಲಿಂಡರ್ನಲ್ಲಿ ಗ್ಯಾಸ್ ಲೀಕ್ ಆಗಿತ್ತು. ಉಳಿದ ಎರಡು ಸಿಲಿಂಡರ್ಗಳು ಖಾಲಿ ಇದ್ದವು. ಈ ಸಂಬಂಧ ನಾಲ್ವರ ಮೃತದೇಹಗಳನ್ನೂ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ" ಎಂದು ಹೇಳಿದರು.
ಸಚಿವ ಹೆಚ್.ಸಿ. ಮಹದೇವಪ್ಪ ಸಂತಾಪ: ಮತ್ತೊಂದೆಡೆ, ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಅವರು ಯರಗನಹಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ವಿಷಯ ತಿಳಿದು ಇಂದು ಜೆಎಸ್ಎಸ್ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದ ಮೃತದೇಹಗಳನ್ನು ವೀಕ್ಷಿಸಿ ತೀವ್ರ ಸಂತಾಪ ವ್ಯಕ್ತಪಡಿಸಿದ ಸಚಿವರು, ಘಟನೆ ಬಗ್ಗೆ ಸಂಬಂಧಿಕರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಸರ್ಕಾರದ ವತಿಯಿಂದ ತಲಾ ಮೂರು ಲಕ್ಷ ರೂ. ಪರಿಹಾರಧನ ಕೊಡಿಸುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ:ಬೆಳಗಾವಿ: ಜಾತ್ರೆ ಪ್ರಸಾದ ಸೇವಿಸಿ 46 ಜನ ಅಸ್ವಸ್ಥ, ಐವರ ಸ್ಥಿತಿ ಗಂಭೀರ - People Fall Sick