ಜಿಲ್ಲಾಧಿಕಾರಿ ಹಾಗೂ ಎಸ್ಪಿ ಹೇಳಿಕೆ (ETV Bharat) ರಾಯಚೂರು: ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ರಾಯಚೂರಿನ ಕಲ್ಲೂರು ಗ್ರಾಮದಲ್ಲಿ ನಡೆದಿದ್ದು ವಿಷಾಹಾರ(ಫುಡ್ ಪಾಯಿಸನ್) ಸೇವನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಭೀಮಣ್ಣ( 60), ಈರಮ್ಮ ( 57) ಮಲ್ಲೇಶ (21), ಪಾರ್ವತಿ ( 19) ಮೃತರು. ಮತ್ತೋರ್ವ ಮಗಳು ಮಲ್ಲಮ್ಮ (23) ಸ್ಥಿತಿ ಗಂಭೀರವಾಗಿದೆ.
ಮಾಂಸಾಹಾರ ಸೇವನೆ ಮಾಡಿದ್ದು, ಫುಡ್ ಪಾಯಿಸನ್ನಿಂದ ಸಾವಾಗಿದೆ ಎಂದು ಶಂಕೆ ವ್ಯಕ್ತವಾಗಿದೆ. ಬುಧವಾರ ಮಧ್ಯಾಹ್ನ ಊಟ ಮಾಡಿ ಜಮೀನಿಗೆ ತೆರಳಿದ್ದರು. ಜಮೀನಿನಲ್ಲಿ ಕೆಲಸ ಮಾಡುವಾಗ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಲಾಗುತ್ತಿದೆ. ಸಾವಿನ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಜಿಲ್ಲಾಧಿಕಾರಿ ನೀಡಿದ ಮಾಹಿತಿ ಇಷ್ಟು: ರಾಯಚೂರು ಜಿಲ್ಲಾಧಿಕಾರಿ ಕೆ.ನಿತೀಶ್ ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. "ಪ್ರಾಥಮಿಕ ವರದಿ ಪ್ರಕಾರ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ 5 ಜನ ಸದಸ್ಯರಿರುವ ಭೀಮಣ್ಣ ಎಂಬುವವರ ಕುಟುಂಬ 2 ದಿನದ ಹಿಂದೆ (ಬುಧವಾರ) ಜೊತೆಯಾಗಿ ಮಾಂಸದ ಜೊತೆ, ಚಪಾತಿ, ತರಕಾರಿ ಪಲ್ಯ ಸೇವಿಸಿದ್ದರು. ಅದಾಗಿ ಮಾರನೆಯ ದಿನ ಎಲ್ಲರಿಗೂ ವಾಂತಿ ಶುರುವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದ್ದರಿಂದ ಕುಟುಂಬದ ಹಿರಿಯ ಭೀಮಣ್ಣ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅದಾದ ಬಳಿಕ ಉಳಿದ 4 ಜನ ಭೀಮಣ್ಣ ಪತ್ನಿ, ಇಬ್ಬರು ಹೆಣ್ಣುಮಕ್ಕಳು, ಓರ್ವ ಮಗನನ್ನು ತಕ್ಷಣ ರಿಮ್ಸ್ ಆಸ್ಪತ್ರೆಗೆ ನಿನ್ನೆ ಸಂಜೆ 5 ಗಂಟೆಗೆ ದಾಖಲಿಸಲಾಗಿತ್ತು. ಬಹು ಅಂಗಾಗ ವೈಫಲ್ಯವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಓರ್ವ ಮಗಳನ್ನು ಬಿಟ್ಟು ಮೂವರು ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಮಲ್ಲಮ್ಮ ಕೋಮಾದಲ್ಲಿ ಇದ್ದಾರೆ. ಅವರನ್ನು ವೆಂಟಿಲೇಟರ್ ನಲ್ಲಿರಿಸಿದ್ದು, ಆದಷ್ಟು ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿಕೊಳ್ಳಲಾಗುತ್ತಿದೆ. ಇನ್ನು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಿದ್ದೇವೆ. ಸದ್ಯ ಪ್ರಾಥಮಿಕ ವರದಿ ಪ್ರಕಾರ ಆಹಾರದಲ್ಲಿ ಕೀಟನಾಶಕದಂತ ವಿಷ ಅಂಶ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಾಗೇ ಸದ್ಯ ಆತ್ಮಹತ್ಯೆ ಬಗ್ಗೆ ಸ್ಪಷ್ಟನೆ ಕೊಡಲು ಸಾಧ್ಯವಿಲ್ಲ" ಎಂದು ಮಾಹಿತಿ ನೀಡಿದರು.
ಘಟನೆ ಬಗ್ಗೆ ಎಸ್ಪಿ ಮಾಹಿತಿ:’’ಘಟನೆ ಬಗ್ಗೆ ವೈದ್ಯಾಧಿಕಾರಿಗಳು ಸುಧೀರ್ಘವಾಗಿ ವಿವರಣೆ ನೀಡಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆ ಬಳಿಕ ನೀಡಲಾಗುವುದು. ಪ್ರಾಥಮಿಕ ವರದಿಯಲ್ಲಿ ವಿಷಹಾರ ಸೇವನೆ ಕಂಡುಬಂದಿದೆ. ಇದು ಆತ್ಮಹತ್ಯೆಯಾ? ಎಂಬ ವಿಚಾರದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ತನಿಖೆ ಮುಗಿದ ಬಳಿಕ ಸ್ಪಷ್ಟ ಮಾಹಿತಿ ತಿಳಿಯಬೇಕಿದೆ. ಕುಟುಂಬದಲ್ಲಿ 5 ಜನ ಇದ್ದರು. 4 ಜನರಲ್ಲಿ ಓರ್ವರು ಖಾಸಗಿ ಆಸ್ಪತ್ರೆಯಲ್ಲಿ, ಮತ್ತುಳಿದ ಮೂವರು ಸರಕಾರಿ ಆಸ್ಪತ್ರೆಯಲ್ಲಿ ತೀರಿಕೊಂಡಿದ್ದಾರೆ‘‘ ಎಂದು ಎಸ್ಪಿ ಪುಟ್ಟಮಾದಯ್ಯ ಹೇಳಿದ್ದಾರೆ
ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಮತ್ತೆ ಪೊಲೀಸ್ ಪಿಸ್ತೂಲ್ ಸದ್ದು: ದರೋಡೆಕೋರನ ಕಾಲಿಗೆ ಹೊಕ್ಕ ಗುಂಡು - Police Firing