ಬೆಂಗಳೂರು: ಅಂತಿಮ ದರ್ಶನಕ್ಕೆ ಬಂದಾಗ ನಡೆದ ಗಲಾಟೆಯಲ್ಲಿ ಸ್ನೇಹಿತನನ್ನ ಕೊಲೆಗೈದ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನ ಕಾಟನ್ ಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಶರತ್ (26), ನಿರಂಜನ್ (19), ದೀಪಕ್ (24) ಹಾಗೂ ಮನೋಜ್ ಕುಮಾರ್ (20) ಬಂಧಿತ ಆರೋಪಿಗಳು. ಆಗಸ್ಟ್ 22ರಂದು ಕಾಟನ್ ಪೇಟೆಯ ಅಂಜನಪ್ಪ ಗಾರ್ಡನ್ನಲ್ಲಿ ಶರತ್ ಎಂಬಾತನಿಗೆ ಚಾಕು ಇರಿದು ಹತ್ಯೆಗೈಯಲಾಗಿತ್ತು.
ಮೃತ ಶರತ್ ಹಾಗೂ ಆರೋಪಿಗಳು ಒಂದೇ ಏರಿಯಾದವರು. ಆಗಸ್ಟ್ 21ರಂದು ಪರಿಚಿತರೊಬ್ಬರ ಸಾವು ಸಂಭವಿಸಿದ್ದರಿಂದ ಶರತ್ ಹಾಗೂ ಆರೋಪಿಗಳು ಅಂತಿಮ ದರ್ಶನ ಪಡೆಯಲು ಅಂಜನಪ್ಪ ಗಾರ್ಡನ್ಗೆ ಬಂದಿದ್ದರು. ಬೆಳಗಿನಜಾವ ವಾಪಸ್ ತೆರಳುವಾಗ ಕೊಲೆಯಾದ ಶರತ್, ಆರೋಪಿ ಶರತ್ನ ಪತ್ನಿಗೆ ಅವಾಚ್ಯವಾಗಿ ನಿಂದಿಸಿದ್ದ. ಈ ವಿಚಾರವಾಗಿ ಶರತ್ ಹಾಗೂ ಆರೋಪಿಗಳ ನಡುವೆ ವಾಗ್ವಾದ ಆರಂಭವಾದಾಗ ಕೊಲೆಯಾದ ಶರತ್, ಆರೋಪಿ ಶರತ್ನ ಪತ್ನಿಯ ಕೂದಲು ಹಿಡಿದು ಎಳೆದಾಡಿದ್ದ. ಈ ವೇಳೆ ಸ್ಥಳದಲ್ಲಿದ್ದವರು ಜಗಳ ಬಿಡಿಸಿ ಕಳಿಸಿದ್ದರು.