ಚಿಕ್ಕಮಗಳೂರು:ಕಡೂರು ತಾಲೂಕಿನ ಹುಲಿಗೊಂದಿ ಹೊಸೂರು ಬಳಿ ರಸ್ತೆ ಬದಿಯ ಕಾಲುವೆಯಲ್ಲಿ ಯುವಕನ ಶವ ಪತ್ತೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧನ ಮಾಡಲಾಗಿದೆ. ಬೆಂಗಳೂರಿನಲ್ಲಿ ಡ್ರೈವರ್ ವೃತ್ತಿ ಮಾಡುತ್ತಿದ್ದ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದರ್ಶನ್ (21) ಎಂಬಾತನನ್ನು ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಲಾಗಿತ್ತು.
ಯುವಕನನ್ನು ಸ್ನೇಹಿತರೇ ಕೊಲೆಗೈದಿದ್ದು, ಮಂಡ್ಯದ ನಾಗಮಂಗಲದ ಮನೋಜ್ ಮತ್ತು ಕೌಶಿಕ್, ಬೆಂಗಳೂರಿನ ಕಿರಣ್ ಹಾಗೂ ರಾಜು ಎಂಬುವರನ್ನು ಈ ಸಂಬಂಧ ಪೊಲೀಸರು ಬಂಧಿಸಿದ್ದಾರೆ. ಮೃತ ದರ್ಶನ್ ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ದರ್ಶನ್ ಮೇಲೆ ಇತ್ತೀಚೆಗೆ ಕೊಲೆ ಯತ್ನ ಕೇಸ್ ದಾಖಲಾಗಿತ್ತು. 15 ದಿನಗಳ ಹಿಂದೆ ಜಾಮೀನು ಪಡೆದು ಹೊರಬಂದಿದ್ದ. ಬಳಿಕ ತನ್ನ ಇಬ್ಬರು ಸ್ನೇಹಿತರ ಜೊತೆ ದರ್ಶನ್ ಕಡೂರಿನ ಮಾಡಾಳು ಗ್ರಾಮದ ತನ್ನ ತಾತನ ಮನೆಗೆ ಬಂದಿದ್ದನು. ಈತನೊಂದಿಗೆ ಬಂದವರು ವಾರದ ಹಿಂದೆ ಬೆಂಗಳೂರಿಗೆ ವಾಪಸ್ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ದರ್ಶನ್ ಕಡೂರಿನಲ್ಲೇ ಉಳಿದಿದ್ದ. ಗುರುವಾರ (ಫೆ.15) ರಾತ್ರಿ ಬೆಂಗಳೂರಿನಿಂದ ಮತ್ತೆ ಬಂದ ದರ್ಶನ್ ಸ್ನೇಹಿತರು, ಆತನನ್ನು ಕಾರಿನಲ್ಲಿ ಕರೆದೊಯ್ದಿದ್ದರು. ಬೆಂಗಳೂರಿನಿಂದ ಸ್ನೇಹಿತರು ಬಂದಿದ್ದಾರೆ, ಅವರ ಜೊತೆ ಹೊಲದ ಶೆಡ್ನಲ್ಲಿ ಮಲಗುತ್ತೇವೆ ಎಂದು ದರ್ಶನ್ ತನ್ನ ತಾತನಿಗೆ ಹೇಳಿದ್ದ. ಆದರೆ, ತಾತ ಹೊಲಕ್ಕೆ ಹೋಗಿ ನೋಡಿದಾಗ ಶೆಡ್ನಲ್ಲಿ ಯಾರೂ ಇರಲಿಲ್ಲ. ಸ್ನೇಹಿತರ ಜೊತೆ ಎಲ್ಲೋ ಹೋಗಿದ್ದಾನೆ ಎಂದು ತಿಳಿದ ತಾತ, ಮನೆಗೆ ಬಂದು ಮಲಗಿದ್ದರು. ಆದರೆ, ದರ್ಶನ್ ಬೆಳಗ್ಗೆ ಮನೆಗೆ ಬಾರದಿದ್ದಾಗ ಹುಡುಕಾಡಿದ್ದು, ಆತನ ಮೃತದೇಹ ಹುಲಿಗೊಂದಿ ಹೊಸೂರು ರಸ್ತೆ ಬಳಿಯ ಕಾಲುವೆಯಲ್ಲಿ ಪತ್ತೆಯಾಗಿತ್ತು. ಕೊಲೆಗೆ ಹಳೇ ವೈಷಮ್ಯವೇ ಕಾರಣ ಎಂದು ತಿಳಿದುಬಂದಿದೆ.
ಕಡೂರು ಪೊಲೀಸರು ಹಾಗೂ ಎಸ್ಪಿ ವಿಕ್ರಂ ಅಮಟೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಕಡೂರು ಪೊಲೀಸರು 24 ಗಂಟೆಯೊಳಗೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿ: ಯುವಕನ ಬರ್ಬರ ಕೊಲೆ