ಕರ್ನಾಟಕ

karnataka

ETV Bharat / state

ಮೈಸೂರು: ಹಣಕಾಸಿನ ವಿಚಾರಕ್ಕೆ ಯುವಕನನ್ನು ಹತ್ಯೆ ಮಾಡಿದ ನಾಲ್ವರ ಬಂಧನ - FOUR ARRESTED FOR MURDERING

ಮೈಸೂರಿನ ಸಿದ್ದಲಿಂಗಪುರದಲ್ಲಿ ಯುವಕನೊಬ್ಬನ ಕೊಲೆ ನಡೆದಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಓರ್ವ ಮಹಿಳೆ ಸೇರಿದಂತೆ ಮೂವರು ಪುರುಷ ಆರೋಪಿಗಳನ್ನು ಬಂಧಿಸಿದ್ದಾರೆ.

FOUR ARRESTED FOR MURDERING A YOUNG MAN OVER FINANCIAL ISSUES IN MYSURU
ಮೈಸೂರು: ಹಣಕಾಸಿನ ವಿಚಾರಕ್ಕೆ ಯುವಕನನ್ನು ಹತ್ಯೆಗೈದ ನಾಲ್ವರ ಬಂಧನ (ETV Bharat)

By ETV Bharat Karnataka Team

Published : Feb 7, 2025, 7:04 AM IST

ಮೈಸೂರು:ಹಣಕಾಸಿನ ವಿಚಾರಕ್ಕೆ ಮಹಿಳೆಯೊಂದಿಗೆ ಜಗಳವಾಡಿದ ಎಂಬ ಕಾರಣಕ್ಕೆ ಯುವಕನೋರ್ವನನ್ನು ಮಹಿಳೆ ಸೇರಿದಂತೆ ನಾಲ್ವರು ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಕಳೆದ ಮಂಗಳವಾರ ರಾತ್ರಿ ಸಿದ್ದಲಿಂಗಪುರದ ಪಾಳು ಮನೆಯೊಂದರಲ್ಲಿ ನಗರದ ಉದಯಗಿರಿ ನಿವಾಸಿ ನೂರುಲ್ಲಾ(35) ಎಂಬಾತನ ಕೊಲೆಯಾಗಿತ್ತು. ಸಿದ್ದಲಿಂಗಪುರ ನಿವಾಸಿ ರಾಜೇಶ್, ಚಂದ್ರು, ಜಯಕುಮಾರ್​ ಹಾಗೂ ಎಚ್​​.ಡಿ.ಕೋಟೆ ನಿವಾಸಿಯಾಗಿರುವ ಮಹಿಳೆ ಬಂಧಿತರು.

ಸಿದ್ದಲಿಂಗಪುರ ನಿವಾಸಿ ರಾಜೇಶ್ ಹಾಗೂ ಮಹಿಳೆ ನಡುವೆ ಅಕ್ರಮ ಸಂಬಂಧವಿತ್ತು. ಹೀಗಾಗಿ ರಾಜೇಶ್ ಮನೆಯವರು ಆತನನ್ನು ಮನೆಯಿಂದ ಹೊರ ಹಾಕಿದ್ದರು. ಬಳಿಕ ರಾಜೇಶ್​​ ಮಹಿಳೆ ಜತೆಯಲ್ಲಿ ಸಿದ್ದಲಿಂಗಪುರದ ಬಳಿಯ ಪಾಳುಬಿದ್ದ ಮನೆಯಲ್ಲಿ ಆಶ್ರಯ ಪಡೆದಿದ್ದರು. ಈ ನಡುವೆ ರಾಜೇಶ್ ಹಣಕ್ಕಾಗಿ ಮಹಿಳೆಯನ್ನು ವೇಶ್ಯಾವಾಟಿಕೆಗೆ ಬಳಸಿಕೊಂಡಿದ್ದ ಎಂಬ ಆರೋಪ ಇದೆ.

ತನಗೆ ಪರಿಚಿತರು ಹಾಗೂ ಅಲ್ಲಿಗೆ ಬರುವವರ ಜೊತೆ ಮಹಿಳೆಯನ್ನು ಕಳುಹಿಸಿ ಹಣ ಸಂಪಾದನೆ ಮಾಡುತ್ತಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಅದರಂತೆ ಮಂಗಳವಾರ ರಾತ್ರಿ ನೂರುಲ್ಲಾ ಕೂಡ ಅಲ್ಲಿಗೆ ಬಂದಿದ್ದಾನೆ. ನಂತರ ಆಕೆಯೊಂದಿಗೆ ಸಂಪರ್ಕ ಬೆಳೆಸಿದ್ದಾನೆ. ಈ ವೇಳೆ ಹಣ ನೀಡುವ ವಿಚಾರದಲ್ಲಿ ಮಹಿಳೆಯೊಂದಿಗೆ ಜಗಳವಾಗಿದೆ.

ಇದರ ಮಧ್ಯೆ ಬಂದ ರಾಜೇಶ್​ ಮೇಲೆ ನೂರುಲ್ಲಾ ಹಲ್ಲೆ ನಡೆಸಿದ್ದಾನೆ. ಇದರಿಂದ ರೊಚ್ಚಿಗೆದ್ದ ರಾಜೇಶ್, ಜಯಕುಮಾರ್, ಚಂದ್ರು ಹಾಗೂ ಮಹಿಳೆ ಸೇರಿ ದೊಣ್ಣೆ, ಚಾಕು, ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ನೂರುಲ್ಲಾನನ್ನು ಹತ್ಯೆ ಮಾಡಿದ್ದಾರೆ. ಘಟನೆಯ ನಂತರ ನಾಲ್ವರು ಕೂಡ ತಲೆಮರೆಸಿಕೊಂಡಿದ್ದರು.

ಬುಧವಾರ ಬೆಳಗ್ಗೆ 7.45ರ ವೇಳೆಯಲ್ಲಿ ಈ ಸಂಬಂಧ ಪೊಲೀಸರಿಗೆ ಮಾಹಿತಿ ಬಂದಿದೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಘಟನೆಯ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ನಂತರ ಆರೋಪಿಗಳಿಗೆ ಹುಡುಕಾಟ ಆರಂಭಿಸಿದ್ದರು. ನಾಗನಹಳ್ಳಿ ರೈಲ್ವೇ ನಿಲ್ದಾಣದ ಬಳಿ ಪರಿಶೀಲನೆ ನಡೆಸಿದ ವೇಳೆ ರಾಜೇಶ್ ಹಾಗೂ ಮಹಿಳೆ ಸಿಕ್ಕಿಬಿದ್ದಿದ್ದಾರೆ. ಮಾರನೇ ದಿನ ಚಂದ್ರ ಮತ್ತು ಜಯಕುಮಾರ್‌ನನ್ನು ಪೊಲೀಸರು ಹುಡುಕಿ ಬಂಧಿಸಿದ್ದಾರೆ.

ವಿಜಯನಗರ ಎಸಿಪಿ ಗಜೇಂದ್ರಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಮೇಟಗಳ್ಳಿ ಪೊಲೀಸ್ ಠಾಣೆ ಪ್ರಭಾರ ಇನ್ಸ್​​ಪೆಕ್ಟರ್ ಪೂವಯ್ಯ ಹಾಗೂ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ:ಮೈಸೂರು ಪೊಲೀಸರ ಭರ್ಜರಿ ಕಾರ್ಯಾಚರಣೆ : 2 ಕೋಟಿ ಮೌಲ್ಯದ ಸೊತ್ತು ವಾರಸುದಾರರಿಗೆ ವಾಪಸ್​​

ABOUT THE AUTHOR

...view details