ಮೈಸೂರು: ಮುಡಾ ಪ್ರಕರಣ ಕೋರ್ಟ್ನಲ್ಲಿರುವುದರಿಂದ ಅದರ ಬಗ್ಗೆ ಕಾಮೆಂಟ್ ಮಾಡುವುದಿಲ್ಲ. ಕೋರ್ಟ್ ಏನು ತೀರ್ಪು ನೀಡುತ್ತೆ ನೋಡೋಣ. ಆದರೆ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಎಲ್ಲ ದಾಖಲೆಗಳು ಇದ್ದಾವೆ. ವಾಲ್ಮೀಕಿ ನಿಗಮದ ದುಡ್ಡಲ್ಲಿ ಬಳ್ಳಾರಿ ಲೋಕಸಭಾ ಚುನಾವಣೆಗೆ 20 ಕೋಟಿ ರೂ. ಮದ್ಯ ಖರೀದಿ ಮಾಡಿರುವ ಬಗ್ಗೆ ಇಡಿ ಚಾರ್ಚ್ಶೀಟ್ನಲ್ಲಿ ಉಲ್ಲೇಖಿಸಿದೆ. ಹಣ ಎಲ್ಲೆಲ್ಲಿ ಹೋಗಿದೆ ಎಂಬ ಹೆಜ್ಜೆ ಗುರುತು ಇದೆ. ಸಿಎಂ ಸಿದ್ದರಾಮಯ್ಯನವರೇ ಸದನದಲ್ಲಿ 187 ಕೋಟಿ ಅಲ್ಲ 89 ಕೋಟಿ ಅಕ್ರಮ ನಡೆದಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕಾನೂನು ಪದವೀಧರರು ಹೌದು ಹಾಗೂ ವಿತ್ತ ಸಚಿವರೂ ಹೌದು. ಹಣಕಾಸಿ ಅಕ್ರಮ ಸಂಬಂಧ ವಿತ್ತ ಸಚಿವರ ತಲೆದಂಡ ಆಗಲೇಬೇಕಾಗುತ್ತದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಸಂಬಂಧ ಈಗಾಗಲೇ ಸಿದ್ದರಾಮಯ್ಯನವರಿಗೆ ನೋಟಿಸ್ ಹೋಗಿರುವುದರಿಂದ ಈ ಪ್ರಕರಣದಲ್ಲಿ ಶೇ 100ರಷ್ಟು ಸಿಕ್ಕಿ ಹಾಕಿಕೊಳ್ಳುತ್ತಾರೆ. ರಾಜೀನಾಮೆ ಕೊಡುವಂತಹ ಪರಿಸ್ಥಿತಿ, ಅನಿರ್ವಾಯತೆ ಅವರಿಗೆ ಎದುರಾಗುತ್ತದೆ ಎಂದರು.
ಮಹಿಷಾ ದಸರಾ ಮಾಡಲು ಬಿಡಲ್ಲ:ನಾಡಹಬ್ಬ ದಸರಾ ಮಾಡಲು ಸಾಕಷ್ಟು ಸಮಯವಿದೆ. ಆದರೆ, ಮಹಿಷಾ ದಸರಾ ಚಾಮುಂಡಿ ಬೆಟ್ಟದಲ್ಲಿ ಮಾಡಲು ಬಿಡುವುದಿಲ್ಲ. ಚಾಮುಂಡಿ ಬೆಟ್ಟಕ್ಕೆ ಕಪ್ಪು ಚುಕ್ಕೆ ಬರಲು ನಾನು ಬಿಡುವುದಿಲ್ಲ. ಸಂಸದನಾಗಿರಲಿ, ಇಲ್ಲದಿರಲಿ ನಾನು ಹೋರಾಟ ಮಾಡುತ್ತೇನೆ. ಮಹಿಷಾ ದಸರಾವನ್ನು ಅವರ ಮನೆಯಲ್ಲಿ ಮಾಡಿಕೊಳ್ಳಲಿ ಎಂದು ಹೇಳಿದರು.