ಬೆಂಗಳೂರು:"ಬೆಳಿಗ್ಗೆ ಒಂದು, ಸಂಜೆ ಒಂದು ಮಾತನಾಡುವವರಿಗೆ ನಾವು ಉತ್ತರ ನೀಡುವುದಿಲ್ಲ. ಮಾಧ್ಯಮದವರಿಗೆ ಅವರು ಗಂಭೀರ ವ್ಯಕ್ತಿ ಎನಿಸಬಹುದು, ಆದರೆ ನಮಗಲ್ಲ. ಅವರ ಯಾವುದೇ ಹೇಳಿಕೆಗಳು ನ್ಯಾಯಯುತವಾಗಿರುವುದಿಲ್ಲ" ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣ ಮುಚ್ಚಿ ಹಾಕಲು ಜಾತಿಗಣತಿ ವಿಷಯ ಮುನ್ನೆಲೆಗೆ ತಂದಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, "ಅವರಿಗೆ ಕೆಲಸವಿಲ್ಲ, ಅದಕ್ಕೆ ಮಾತನಾಡುತ್ತಾರೆ. ಅವರಿಗೆ ಮೋದಿ ಅವರು ಒಳ್ಳೆಯ ಕೆಲಸ ಕೊಟ್ಟಿದ್ದಾರೆ, ಅದನ್ನು ಬಿಟ್ಟು ಕರ್ನಾಟಕದ ವಿಚಾರಗಳನ್ನು ಮಾತನಾಡುತ್ತಿದ್ದಾರೆ" ಎಂದು ಟೀಕಿಸಿದರು.
ನಾವೆಲ್ಲ ಸಿದ್ದರಾಮಯ್ಯನವರ ಬೆನ್ನಿಗಿದ್ದೇವೆ: ಸಚಿವರಾದ ಮಹದೇವಪ್ಪ, ಪರಮೇಶ್ವರ್ ಭೇಟಿ ವಿಚಾರದ ಬಗ್ಗೆ ಮಾತನಾಡಿ, "ಮಹದೇವಪ್ಪ ಹಿರಿಯ ಸಚಿವರು. ಪರಮೇಶ್ವರ್ ಪ್ರಮುಖ ಖಾತೆ ಹೊಂದಿರುವವರು, ಇವರುಗಳು ರಾಜಕೀಯ ಹೊರತಾಗಿ ಸೇರಿದ್ದಾರೆ. ಈಗಾಗಲೇ ಸರ್ಕಾರದ 136 ಶಾಸಕರು ಸಿದ್ದರಾಮಯ್ಯರ ಬೆನ್ನಿಗಿದ್ದಾರೆ ಎನ್ನುವ ಸಂದೇಶವನ್ನು ನಾವು ಕೊಟ್ಟಿದ್ದೇವೆ" ಎಂದು ಹೇಳಿದರು.
ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ವಿಚಾರಕ್ಕೆ, "ಮಲ್ಲಿಕಾರ್ಜುನ ಖರ್ಗೆಯವರು ನಮ್ಮ ರಾಜ್ಯದವರು, ಕೆಪಿಸಿಸಿ ಅಧ್ಯಕ್ಷರು ಅವರನ್ನು ಗೌರವಯುತವಾಗಿ ಭೇಟಿಯಾಗಿದ್ದಾರೆ. ಭೇಟಿಯಾಗುವುದು ಪಕ್ಷದ ಶಿಸ್ತು" ಎಂದರು.
ಕಾಂಗ್ರೆಸ್ ಸರ್ಕಾರವನ್ನು ನಾವು ಬೀಳಿಸುವುದಿಲ್ಲ, ಅವರೇ ಕಿತ್ತಾಡಿಕೊಂಡು ಸರ್ಕಾರ ಬಿದ್ದು ಹೋಗುತ್ತದೆ ಎನ್ನುವ ಬಿಜೆಪಿ ಟೀಕೆಗೆ, "ಅವರುಗಳು ಇದೇ ಗುಂಗಿನಲ್ಲಿರಲಿ" ಎಂದು ತಿರುಗೇಟು ಕೊಟ್ಟರು.