ಬೆಂಗಳೂರು : ಚಿನ್ನದಂಗಡಿ ಮಾಲೀಕನಿಗೆ ವಂಚಿಸಿದ ಪ್ರಕರಣದ ಆರೋಪಿ ಮಹಿಳೆ ನನಗೆ ಪರಿಚಯವಷ್ಟೆ, ಸ್ನೇಹಿತೆಯಲ್ಲ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್ ಸ್ಪಷ್ಟನೆ ನೀಡಿದರು.
ವರ್ತೂರು ಪ್ರಕಾಶ್ ಅವರ ಆಪ್ತೆ ಎಂದು ಪರಿಚಯಿಸಿಕೊಂಡು ಜ್ಯುವೆಲ್ಲರಿ ಶಾಪ್ ಮಾಲೀಕರಿಗೆ ವಂಚಿಸಿದ ಆರೋಪದಡಿ ಶ್ವೇತಾ ಗೌಡ ಎಂಬ ಮಹಿಳೆಯನ್ನು ಡಿಸೆಂಬರ್ 23ರಂದು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದರು. ಆ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ ಆರೋಪದಡಿ ವರ್ತೂರು ಪ್ರಕಾಶ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ನೋಟಿಸ್ ನೀಡಿದ್ದರು.
ಮಾಜಿ ಶಾಸಕ ವರ್ತೂರು ಪ್ರಕಾಶ್ ಮಾತನಾಡಿದರು (ETV Bharat) ಇಂದು ಪೊಲೀಸರೆದುರು ವಿಚಾರಣೆಗೆ ಹಾಜರಾದ ಬಳಿಕ ಮಾತನಾಡಿದ ವರ್ತೂರು ಪ್ರಕಾಶ್, "ಆರೋಪಿ ಮಹಿಳೆ ನನ್ನ ಸ್ನೇಹಿತೆ ಅಲ್ಲ, ಅದೆಲ್ಲವೂ ಸುಳ್ಳು ಮಾಹಿತಿ. ಐದಾರು ತಿಂಗಳ ಹಿಂದೆ ಆಕೆಯ ಪರಿಚಯವಾಗಿದ್ದು ನಿಜ. ರಾಜಕಾರಣಿಗಳು ಎಂದಮೇಲೆ ಬೇರೆ ಬೇರೆ ಜನರು ಭೇಟಿಯಾಗುವುದು ಸಹಜ. ಆದರೆ, ನನ್ನ ಹೆಸರು ಬಳಸಿಕೊಂಡು ಆಕೆ ಚಿನ್ನಾಭರಣ ಪಡೆದು ವಂಚಿಸಿರುವುದು ಪೊಲೀಸರ ಮೂಲಕವೇ ನನಗೆ ತಿಳಿಯಿತು. ಆಕೆಯ ಮಾತು ನಂಬಿ ಎರಡು ಕೋಟಿ ಮೌಲ್ಯದ ಚಿನ್ನಾಭರಣ ಹೇಗೆ ಕೊಟ್ಟರೋ ನನಗೆ ಗೊತ್ತಿಲ್ಲ. ನನ್ನಂಥೆಯೇ ಕೆಲ ರಾಜಕಾರಣಿಗಳ ಹೆಸರು, ಫೋಟೋ ತೆಗೆದುಕೊಂಡು ಆಕೆ ವಂಚನೆ ಮಾಡಿದ್ದಾಳೆ ಎಂದು ಕೆಲವು ದೂರುಗಳು ಬಂದಿವೆಯಂತೆ. ಪೊಲೀಸರ ವಿಚಾರಣೆ ವೇಳೆ ಎಲ್ಲಾ ಮಾಹಿತಿಯನ್ನ ಕೊಟ್ಟಿದ್ದೇನೆ'' ಎಂದರು.
ಕಮರ್ಷಿಯಲ್ ಸ್ಟ್ರೀಟ್‌ನ ನವರತ್ನ ಜ್ಯುವೆಲ್ಲರ್ಸ್ ಮಾಲೀಕ ಸಂಜಯ್ ಭಾಫ್ನಾ ಅವರಿಂದ ಸುಮಾರು 2.945 ಕೆ.ಜಿ ಚಿನ್ನ ಪಡೆದು ವಂಚಿಸಿದ ಆರೋಪದಡಿ ಶ್ವೇತಾ ಗೌಡ ಎಂಬ ಮಹಿಳೆಯನ್ನ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ :ಮಾಜಿ ಸಚಿವರ ಆಪ್ತೆ ಎಂದು ಚಿನ್ನ ಖರೀದಿ ನೆಪದಲ್ಲಿ ವಂಚನೆ: ಆರೋಪಿ ಮಹಿಳೆ ಬಂಧನ - WOMAN ARRESTED FOR CHEATING