ಮೈಸೂರು :ಇಲ್ಲಿನ ಕುವೆಂಪುನಗರದ ರಾಷ್ಟ್ರಕವಿ ಕುವೆಂಪು ಪ್ರತಿಮೆಯ ಬಳಿ ಕಳೆದ ಹಲವಾರು ದಿನಗಳಿಂದ ಆಹಾರ, ನೀರು, ಸ್ನಾನ ಇಲ್ಲದೆ ರಸ್ತೆ ಬದಿಯಲ್ಲಿ ನಿತ್ರಾಣಗೊಂಡು ಬಿದ್ದಿದ್ದ ಯುವಕನನ್ನು ಆಸ್ಪತ್ರೆಗೆ ಸೇರಿಸಿ ಮಾಜಿ ಶಾಸಕ ಎಂ. ಕೆ ಸೋಮಶೇಖರ್ ಮಾನವೀಯತೆ ಮೆರೆದಿದ್ದಾರೆ.
ನಂಜನಗೂಡು ಮೂಲದ ಶ್ರೀಕಂಠ ಆಸ್ಪತ್ರೆಗೆ ಸೇರಿದ ಯುವಕ. ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಎಂ. ಕೆ ಸೋಮಶೇಖರ್, ಕೆ. ಆರ್ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ಆಂಬ್ಯುಲೆನ್ಸ್ ಕರೆಯಿಸಿ ನಿರಾಶ್ರಿತನಿಗೆ ಹೆಚ್ಚಿನ ಚಿಕಿತ್ಸೆ, ಔಷಧೋಪಚಾರ, ಶುಶ್ರೂಷೆ ನೀಡಲು ಸೂಚಿಸಿದರು.
ಮಾಜಿ ಶಾಸಕ ಎಂ ಕೆ ಸೋಮಶೇಖರ್ ಮಾತನಾಡಿದರು (ETV Bharat) ಪಾಲಿಕೆಯ ನಿರಾಶ್ರಿತರ ಕೇಂದ್ರಕ್ಕೂ ಸಹ ಕರೆ ಮಾಡಿ ಗುಣಮುಖನಾದ ನಂತರ ಅವನಿಗೆ ಸ್ಥಳ ನೀಡಿ ನಿರಾಶ್ರಿತರ ಕೇಂದ್ರಕ್ಕೆ ದಾಖಲು ಮಾಡಿಕೊಂಡು ಸಹಾಯಹಸ್ತ ನೀಡಿ ಎಂದು ಮನವಿ ಮಾಡಿದರು. ಆತನಿಗೆ ಎಂ. ಕೆ ಸೋಮಶೇಖರ್ ಅವರೇ ನಿಂತು ಆಂಬ್ಯುಲೆನ್ಸ್ ಮೂಲಕ ಶಿಫ್ಟ್ ಮಾಡಿಸಿದ್ದನ್ನು ನೋಡಿದ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆಯಲ್ಲಿ ಎಂ. ಕೆ ಸೋಮಶೇಖರ್ ಮಾತನಾಡಿ, ಇಂತಹ ಕೆಲಸ ನನಗೇನು ಹೊಸದಲ್ಲ. ರಸ್ತೆಯಲ್ಲಿ ಅದೆಷ್ಟೋ ಜನ ಅಮಾಯಕರು, ಅಪರಿಚಿತರು ನಿತ್ರಾಣಗೊಂಡಿರುವವರನ್ನು ಆಸ್ಪತ್ರೆಗೆ ಸೇರಿಸಿದ್ದೇನೆ. ಆರ್ಥಿಕ ಸಹಾಯ, ಔಷಧೋಪಚಾರ ಕೊಡಿಸಿದ್ದೇನೆ. ಎಷ್ಟೋ ಜನ ಅಪಘಾತಕ್ಕೊಳಪಟ್ಟವರಿಗೆ ನೆರವಾಗಿದ್ದೇನೆ. ಮಾನವೀಯತೆಗಿಂತ ದೊಡ್ಡದು ಯಾವುದೂ ಇಲ್ಲ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗುವಂತೆ ಮಾಡಿದರೆ ಎಷ್ಟೋ ಜನರ ಪ್ರಾಣ ಉಳಿಯುತ್ತದೆ ಎಂದು ಹೇಳಿದರು.
ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದೇ ನಮಗೆ ಸಿಗುವ ಸಂತೋಷ; ನಾನೆಂದು ಆಂಬ್ಯುಲೆನ್ಸ್ ಬರಲಿ ಎಂದು ಕಾಯುವವನಲ್ಲ. ರಕ್ತದ ಮಡುವಿನಲ್ಲಿ ಬಿದ್ದಿದ್ದವರನ್ನು ನನ್ನ ಕಾರಿನಲ್ಲಿಯೇ ಆಸ್ಪತ್ರೆಗೆ ಸೇರಿಸಿದ್ದೇನೆ. ತುಂಬಾ ಜನ ಎಲ್ಲಿಯಾದ್ರೂ ಸಿಕ್ಕಿದಾಗ ಸರ್ ನೀವು ನನ್ನ ಜೀವ ಉಳಿಸಿದ್ದೀರಿ ಎಂದು ಹೇಳಿದಾಗ ಅದೇ ನಮಗೆ ಸಿಗುವ ಸಂತೋಷ. ಕಷ್ಟದಲ್ಲಿರುವರಿಗೆ ಯಾರೇ ಆಗಲಿ ಸಹಾಯ ಮಾಡಬೇಕು. ಅದೇ ನಾವು ಮಾಡಬೇಕಾದ ದೇವರ ಕೆಲಸ. ಅದೇ ನಮಗೆ ತೃಪ್ತಿ ಕೊಡುವಂತದ್ದು ಎಂದು ಹೇಳಿದರು.
ಇದನ್ನೂ ಓದಿ :ಜೋಗಕ್ಕೆ ಬರುತ್ತಿದ್ದ ಪ್ರವಾಸಿ ಬಸ್ ಪಲ್ಟಿ ; 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ - BUS OVERTURNED