ಬೆಂಗಳೂರು: "ಯಾರು ಯಡಿಯೂರಪ್ಪ ಅವರಿಂದ ಅಧಿಕಾರ ಪಡೆದಿದ್ದರೋ, ಅವರೇ ಇವತ್ತು ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಅವರನ್ನು ಎತ್ತಿಕಟ್ಟುತ್ತಿದ್ದಾರೆ" ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರಮೇಶ್ ಜಾರಕಿಹೊಳಿ, ಯತ್ನಾಳ್ ಒಳ್ಳೆಯವರೇ, ಆದರೆ ಪಕ್ಷದ ಕೆಲವರು ಅವರಿಗೆ ಪ್ರಚೋದನೆ ಕೊಡುತ್ತಿದ್ದಾರೆ. ಯತ್ನಾಳ್, ರಮೇಶ್ ಹಿಂದೆ ಯಾರು ಇದ್ದಾರೆ ಎಂದು ಹೈಕಮಾಂಡ್ಗೆ ಗೊತ್ತಿದೆ. ಇದೇ ರೀತಿ ಮುಂದುವರೆದರೆ ನಿಮ್ಮ ರಕ್ಷಣೆ ಮಾಡುವವರ ಹೆಸರನ್ನು ಬಹಿರಂಗಪಡಿಸಬೇಕಾಗುತ್ತದೆ. ತೊಟ್ಟಿಲು ತೂಗಿ ಮಗು ಚಿವುಟವಂತಹ ಕೆಲಸ ಮಾಡುತ್ತಿದ್ದಾರೆ. ಕೊಂಡಿ ಮಂಚಣ್ಣನವರು ಪಕ್ಷದಲ್ಲಿದ್ದಾರೆ. ಅವರು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ" ಎಂದು ದೂರಿದರು.
ಯಡಿಯೂರಪ್ಪ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ?: "ಯತ್ನಾಳ್, ರಮೇಶ್ ಜಾರಕಿಹೊಳಿ ಹುಚ್ಚು ಹುಚ್ಚಾಗಿ ಮಾತಾಡಿದ್ದಾರೆ. ಅವರಿಬ್ಬರನ್ನು ಮುಲಾಜಿಲ್ಲದೇ ಉಚ್ಛಾಟನೆ ಮಾಡಿ ಅಂತ ಹೈಕಮಾಂಡ್ಗೆ ದೂರು ಕೊಡುತ್ತೇವೆ. ಕಾಂಗ್ರೆಸ್ ಒಳ ಕಚ್ಚಾಟ ಮರೆಸಲು ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ, ವಿಜಯೇಂದ್ರ ವಿರುದ್ಧ ಮಾತನಾಡುತ್ತಿದ್ದಾರೆ. ಅದಕ್ಕೇ ನಾನು ಹೇಳಿದ್ದು, ಅವರು ಕಾಂಗ್ರೆಸ್ ಏಜೆಂಟರು ಅಂತ. ಯತ್ನಾಳ್ ನಿನಗೆ ಯಡಿಯೂರಪ್ಪ ಬಗ್ಗೆ ಮಾತಾಡುವುಕ್ಕೆ ಯಾವ ನೈತಿಕತೆ ಇದೆ?. ಯತ್ನಾಳ್ ಒಬ್ಬ ಗೋಮುಖ ವ್ಯಾಘ್ರ. ಯತ್ನಾಳ್ ಕಾಂಗ್ರೆಸ್ ಏಜೆಂಟ್ನಂತೆ ವರ್ತನೆ ಮಾಡುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಚಿವ ರೇಣುಕಾಚಾರ್ಯ (ETV Bharat) "ರಾಜ್ಯದ ಕೆಲವರು ಮಗು ಚಿವುಟಿ ತೊಟ್ಟಿಲು ತೂಗುತ್ತಿದ್ದಾರೆ. ಯತ್ನಾಳ್ರನ್ನು ಎತ್ತಿ ಕಟ್ಟುತ್ತಿದ್ದಾರೆ . ಆ ಮೂಲಕ ವಿಜಯೇಂದ್ರರನ್ನು ಕುಗ್ಗಿಸಬಹುದು ಅಂದುಕೊಂಡಿದ್ದಾರೆ. ವಿಜಯೇಂದ್ರ ಬಚ್ಚಾ ಅಲ್ಲ, ಸಮರ್ಥ, ನುರಿತ ರಾಜಕಾರಣಿ. ವಿಜಯೇಂದ್ರಗೆ ಜ್ಞಾನ ಇದೆ, ಪಕ್ಷ ಅಧಿಕಾರಕ್ಕೆ ತರುವ ಛಲ ಇದೆ. ಬಹಳ ಗೌರವ ಕೊಟ್ಟು ಇದುವರೆಗೂ ನಿನ್ನ ಬಗ್ಗೆ ಮಾತಾಡಿದ್ದೇವೆ, ಇನ್ಮುಂದೆ ಸಹಿಸಲ್ಲ. ಮುಂದಿನ ಶನಿವಾರ ನಾವು ಸಭೆ ಸೇರುತ್ತೇವೆ. ಹೈಕಮಾಂಡ್ ಬಳಿಗೆ ಹೋಗಿ ದೂರು ಕೊಡುತ್ತೇವೆ" ಎಂದು ತಿಳಿಸಿದರು.
ಇದನ್ನೂ ಓದಿ:ಬಸನಗೌಡ ಯತ್ನಾಳ್ ಹೇಳಿಕೆಗೆ ಬಿ.ವೈ.ವಿಜಯೇಂದ್ರ ಟಾಂಗ್
"ಯತ್ನಾಳ್, ರಮೇಶ್ ಜಾರಕಿಹೊಳಿ ಮಾತುಗಳಿಂದ ಕಾರ್ಯಕರ್ತರ ಮನಸಿಗೆ ನೋವಾಗಿದೆ. ಕೆಲವರು ಅವರನ್ನು ಬೆಂಬಲಿಸುತ್ತಿದ್ದಾರೆ. ಆಕಾಶಕ್ಕೆ ಉಗುಳಿದರೆ, ಅದು ಉಗುಳಿದವರ ಮೇಲೆಯೇ ಬೀಳುತ್ತೆ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರೆಯುತ್ತಾರೆೆ, ಅವರ ನೇತೃತ್ವದಲ್ಲಿ ಪಕ್ಷ ಕಟ್ಟುತ್ತೇವೆ. ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ವಿಜಯೇಂದ್ರರನ್ನು ಅಧ್ಯಕ್ಷ ಮಾಡಿದ್ದು ಹೈಕಮಾಂಡ್. ವಿಜಯೇಂದ್ರರನ್ನು ಬೈದರೆ ಹೈಕಮಾಂಡ್ನ್ನು ಬೈದಂತೆ" ಎಂದರು.
ಯತ್ನಾಳ್ ಮೂರು ಮುಖವಾಡ ಹಾಕಿದ್ದಾರೆ: "ನೀವು ಏನೇ ಮಾಡಿದರೂ ವಿಜಯೇಂದ್ರರ ವರ್ಚಸ್ಸು ಕುಗ್ಗಲ್ಲ. ಯತ್ನಾಳ್ ಅವರದ್ದು ಹರಕು ಬಾಯಿ. ಯಡಿಯೂರಪ್ಪ ವಿರುದ್ಧ ಸಂಚು ಮಾಡಿದಾಗಲೆಲ್ಲ ಬಿಜೆಪಿಗೆ ಕಮ್ಮಿ ಸ್ಥಾನ ಬಂದಿದೆ. ಅನಗತ್ಯ ಟೀಕೆ ಮಾಡುತ್ತಿದ್ದೀರಿ, ಇದನ್ನು ನಾವು ಸಹಿಸಲ್ಲ. ಈ ಮನುಷ್ಯನಿಗೆ ಮೂರು ಮುಖವಾಡ ಇದೆ. ಉತ್ತರ ಕರ್ನಾಟಕದ ಹುಲಿ ಅಂತಾರೆ, ಅಲ್ಲಿಗೆ ಎಷ್ಟು ಅನುದಾನ ತೆಗೆದುಕೊಂಡು ಹೋಗಿದ್ದೀರಿ?. ಎರಡನೇದು ಹಿಂದೂ ಹುಲಿ ಮುಖವಾಡ. ಹಿಂದೂ ಹುಲಿ ಆದೋರು ಟಿಪ್ಪು ಟೋಪಿ ಹಾಕಿ, ಖಡ್ಗ ಹಿಡಿದು ಅವರ ಜೊತೆ ಊಟ ಮಾಡಿದ್ರಿ, ಎಲ್ಲಿ ಹೋಗಿತ್ತು ಆಗ ಹಿಂದೂ ಹುಲಿ. ಮೂರನೇಯದು ಪಂಚಮಸಾಲಿ ಹೋರಾಟದಲ್ಲಿ ಯತ್ನಾಳ್ ಅವರದ್ದು ದ್ವಂದ್ವ ನಿಲುವಿನ ಮುಖವಾಡ. ಎಲ್ಲರೂ 2ಎ ಮೀಸಲಾತಿಗಾಗಿ ಹೋರಾಟ ಮಾಡಿದರೆ, ನಮಗೆ 2ಎ ಮೀಸಲಾತಿ ಬೇಡ ಅಂತಾರೆ ಯತ್ನಾಳ್. ತಮ್ಮ ಸ್ವಾರ್ಥಕ್ಕೆ ಯತ್ನಾಳ್ ಮೂರು ಮುಖವಾಡ ಹಾಕಿದ್ದಾರೆ, ಈಗ ಅವರ ಮುಖವಾಡ ಕಳಚಿದೆ. ನಿಮ್ಮ ಬೆಂಬಲಕ್ಕೆ ಸಂಸದರು ಇದ್ದಾರೆ ಅಂದ್ರಲ್ಲ, ತಾಕತ್ ಇದ್ರೆ ಅವರ ಹೆಸರು ಹೇಳಿ" ಎಂದು ಸವಾಲು ಹಾಕಿದರು.
ಇಬ್ಬರು ಬೀದಿಯಲ್ಲಿ ಮಾನ ಹರಾಜು ಹಾಕುತ್ತಿದ್ದಾರೆ:ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡಿ, "ಇಬ್ಬರು ವ್ಯಕ್ತಿಗಳಿಂದ ನಮ್ಮ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತಿದೆ. ಆ ಇಬ್ಬರು ಮೂರೂ ಬಿಟ್ಟು ಬೀದಿಯಲ್ಲಿ ನಿಂತಿದ್ದಾರೆ. ಅವರಿಗೆ ಸಂಸ್ಕಾರ ಇಲ್ಲ, ಪಕ್ಷದ ಸಿದ್ಧಾಂತ ಇಲ್ಲ. ಪಕ್ಷದ ಮರ್ಯಾದೆ ಬೀದಿಯಲ್ಲಿ ಹರಾಜು ಹಾಕುತ್ತಿದ್ದಾರೆ. ನಾವು ಪಕ್ಷ ಉಳಿಸುವವರು, ಯಾವತ್ತೂ ಪಕ್ಷದ ಅಧ್ಯಕ್ಷರ ವಿರುದ್ಧ ಚಕಾರ ಎತ್ತಿಲ್ಲ. ಕಳೆದ 35 ವರ್ಷಗಳಿಂದಲೂ ಚುನಾವಣೆ ನಡೆದಿಲ್ಲ, ಸಹಮತದಿಂದಲೇ ಅಧ್ಯಕ್ಷರ ಆಯ್ಕೆ ಮಾಡುತ್ತ ಬರುತ್ತಿದ್ದಾರೆ. ವಿಜಯೇಂದ್ರ ಬಚ್ಚಾ ಅಲ್ಲ, ಅವರಿಗೆ 52 ವರ್ಷ ವಯಸ್ಸಾಗಿದೆ" ಎಂದರು.
ಇದನ್ನೂ ಓದಿ:ಕಾಂಗ್ರೆಸ್ ನಾಯಕರ ಬಡಿದಾಟ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತಿದೆ: ಪ್ರಲ್ಹಾದ್ ಜೋಶಿ