ಬೆಂಗಳೂರು:ಸಂತ್ರಸ್ತ ಮಹಿಳೆಯನ್ನು ಅಪಹರಿಸಿದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೋಮವಾರಕ್ಕೆ ಮುಂದೂಡಿದೆ.
ಜಾಮೀನು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಹೆಚ್. ಡಿ. ರೇವಣ್ಣ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಯುವುದು ಅನಿವಾರ್ಯವಾಗಿದೆ. ಇಂದು ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಎಸ್ಐಟಿ ಪರ ವಕೀಲೆ ಜಾಯ್ನಾ ಕೊಠಾರಿ ವಾದ ಮಂಡಿಸಿ, ''ರೇವಣ್ಣ ಅವರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದರು. ವಿಳಂಬದ ಉದ್ದೇಶವಿಲ್ಲ, ನಮ್ಮ ವಾದ ಮಂಡನೆಗೆ ಕಾಲಾವಕಾಶ ನೀಡಬೇಕು'' ಎಂದು ಮನವಿ ಮಾಡಿದರು. ಇದನ್ನು ತಿರಸ್ಕರಿಸಿದ ವಿಶೇಷ ನ್ಯಾಯಾಲಯ, ''ನೀವೂ ಹಿರಿಯ ವಕೀಲರಿದ್ದೀರಿ. ಬೇರೆ-ಬೇರೆ ಪ್ರಕರಣಗಳಲ್ಲಿ ವಾದ ಮಂಡನೆಗೆ ಕಾಲಾವಕಾಶ ನೀಡಲಾಗಿಲ್ಲ'' ಎಂದಿತು.
ರೇವಣ್ಣ ಪರ ವಕೀಲರ ವಾದ: ರೇವಣ್ಣ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿ, ''ಜಾಮೀನು ಅರ್ಜಿ ಊರ್ಜಿತ ಎಂಬ ನನ್ನ ವಾದಕ್ಕೆ ತಕರಾರು ತೆಗೆದಿದ್ದಾರೆ. 56 ವರ್ಷಗಳ ವಕೀಲ ವೃತ್ತಿಯಲ್ಲಿ ಎಂದಿಗೂ ನಾನು ತಪ್ಪು ಮಾಹಿತಿ ನೀಡಿಲ್ಲ. ತೀಸ್ತಾ ಸೆಟಲ್ ವಾಡ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅಲ್ಲದೆ, 23 ಪ್ರಕರಣಗಳಲ್ಲಿ ನಿರಂಜನ್ ಸಿಂಗ್ ಕೇಸ್ನಂತೆ ಅನುಸರಿಸಲಾಗಿದ್ದು, ಜಾಮೀನು ಅರ್ಜಿ ಸಲ್ಲಿಸಬಹುದು ಎಂದು ತೀರ್ಪಿನಲ್ಲಿ ಹೇಳಲಾಗಿದೆ'' ಎಂದರು.
ಸುಶೀಲ್ ಅಗರವಾಲ್ ಪ್ರಕರಣ ತೀರ್ಪು ಓದಿ, ಕಸ್ಟಡಿ ಅವಧಿಯಲ್ಲಿ ಜಾಮೀನು ಅರ್ಜಿ ಕುರಿತಂತೆ ಸಿ.ವಿ. ನಾಗೇಶ್ ಪ್ರತಿಪಾದಿಸಿದರು. ''ಎಷ್ಟೇ ಜನ ಸರ್ಕಾರಿ ವಿಶೇಷ ಅಭಿಯೋಜಕರು ವಾದಿಸಿದರೂ ನನ್ನ ಆಕ್ಷೇಪವಿಲ್ಲ. ಕೋರ್ಟ್ನ ಗಾಂಭೀರ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಸಿಆರ್ಪಿಸಿ 24 (8)ರಡಿ ಸರ್ಕಾರ ಎಸ್ ಪಿಸಿಯಾಗಿ ಓರ್ವ ವಕೀಲನನ್ನು ನೇಮಿಸಬಹುದಾಗಿದೆ. ಮೂವರನ್ನು ಎಸ್ಪಿಪಿಗಳನ್ನು ನೇಮಿಸಿದೆ, ಇದರ ಬಗ್ಗೆ ನನ್ನ ತಕರಾರಿಲ್ಲ. ಆದರೆ, ಒಮ್ಮೆಲೇ ಇಬ್ಬರು ವಾದ ಮಂಡಿಸುವುದು ಬೇಡ. ಒಬ್ಬರಾದ ಮೇಲೆ ಒಬ್ಬರು ವಾದ ಮಂಡಿಸಲಿ'' ಎಂದು ಪರೋಕ್ಷವಾಗಿ ಮೂವರು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
''ಅಪಹರಣವಾದ ಮಹಿಳೆ ಪತ್ತೆಯಾಗದ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ನಿರಾಕರಣೆಯಾಗಿತ್ತು. ಮಹಿಳೆಯ ಸುರಕ್ಷತೆ ಪ್ರಸ್ತಾಪಿಸಿ ಬೇಲ್ ರಿಜೆಕ್ಟ್ ಮಾಡಲಾಗಿತ್ತು. ಆದರೆ ಅಂದೇ ಆ ಮಹಿಳೆ ಪತ್ತೆಯಾಗಿದ್ದಳು. 364ಎ ಹಾಗೂ 365 ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸುವ ಪ್ರಮೇಯವೇ ಇರಲಿಲ್ಲ. ಸೆಕ್ಷನ್ 364ಎ ಅಂದರೆ ಯಾರನ್ನಾದರೂ ಅಪಹರಣ ಮಾಡಿ, ಒತ್ತೆಯಾಳಾಗಿಟ್ಟುಕೊಂಡಿದ್ದಕ್ಕೆ ಸಂಬಂಧಿಸಿದ್ದಾಗಿದೆ. ಆದರೆ, ಅಂತಹ ಘಟನೆ ಇಲ್ಲಿ ನಡೆದಿಲ್ಲ. ಆದರೂ 364ಎ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. 21 ವರ್ಷದ ಯುವಕ ನೀಡಿದ ದೂರಿನಲ್ಲಿ ಮಹಿಳೆ ಅಪ್ರಾಪ್ತೆ ಅಲ್ಲ ಎಂಬುದು ಸ್ಪಷ್ಟವಾಗಿದೆ. ಅಪ್ರಾಪ್ತೆ ಆಗಿದ್ದರೆ ಈ ಸೆಕ್ಷನ್ ಅನ್ವಯವಾಗುತ್ತಿತ್ತು. ತನಗೆ ಸುಳ್ಳು ಹೇಳಿ ತನ್ನ ತಾಯಿಯನ್ನು ಕರೆದೊಯ್ಯಲಾಗಿದೆ ಎಂದು ದೂರಿನಲ್ಲಿದೆ. ಅದರೆ, ಸುಳ್ಳು ಹೇಳಿ ವಂಚಿಸಿ ಕರೆದೊಯ್ದಿದ್ದಾರೆ ಎಂಬ ಆರೋಪವಿಲ್ಲ. ಮಗನಿಗೆ ಸುಳ್ಳು ಹೇಳಿ ಕರೆದೊಯ್ದರೆ ಅಪಹರಣವಾಗುವುದಿಲ್ಲ. ಸಿಎಂ ಹೇಳಿದ್ದಾರೆ ಎಂದು ಕರೆದೊಯ್ದರೆ ಸಿಎಂರನ್ನು ಬಂಧಿಸಬೇಕಾ ಇಲ್ಲ, ಹೆಚ್.ಡಿ. ರೇವಣ್ಣ ಹೇಳಿದ್ದಾರೆಂದು ಹೇಳಿದರೆ ಅದು ಅಪಹರಣವಾಗಬೇಕೆ? ಇದರಲ್ಲಿ ಮೋಸವಿದೆಯೇ? ಬಲಪ್ರಯೋಗ ಆಗಿದೆಯಾ?'' ಎಂದು ಪ್ರಶ್ನಿಸಿದರು.
''ಅವರೇ ಹೇಳಿದಂತೆ ರೇವಣ್ಣ ಮನೆಯಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದರು. ಹೀಗಾಗಿ, ಅಪಹರಣದ ಯಾವುದೇ ಅಂಶಗಳು ಅನ್ವಯವಾಗುವುದಿಲ್ಲ. ಮೋಸ ಮಾಡಿ ಅಪಹರಣ ಮಾಡಿದ ಆರೋಪವಿಲ್ಲ. ಆದರೂ ರೇವಣ್ಣರನ್ನು ಎ1 ಆರೋಪಿ ಮಾಡಲಾಗಿದೆ. ಸೆಕ್ಷನ್ 365ರಡಿ ಅಕ್ರಮ ಬಂಧನ ಕೂಡ ಅನ್ವಯವಾಗುವುದಿಲ್ಲ. ಅಪಹರಣವಿಲ್ಲ.. ಅಕ್ರಮ ಬಂಧನವೂ ಇಲ್ಲ. ಕೇಸ್ ದಾಖಲಿಸಬಹುದು. ಪೊಲೀಸರ ಬಳಿ ಸಿಆರ್ಪಿಸಿ ಸೆಕ್ಷನ್ 161 ಅಸ್ತ್ರವಿದೆ. ಏನೂ ಬೇಕಾದರೂ ಹೇಳಿಕೆ ದಾಖಲಿಸಬಹುದು. ನಾಳೆ ಯಾರಿಂದಲಾದರೂ ಸಾಕ್ಷ್ಯ ಸೃಷ್ಟಿಸಿ ಹೇಳಿಕೆ ದಾಖಲಿಸಬಹುದು. ಎವಿಡೆನ್ಸ್ ಆ್ಯಕ್ಟ್ 27ರಡಿ ಸಾಕ್ಷ್ಯ ಸೃಷ್ಟಿಸಿಬಹುದು. ಚುನಾವಣೆ ವೇಳೆ ಎಫ್ಐಆರ್ ದಾಖಲಿಸಲಾಗಿದೆ'' ಎಂದು ಆರೋಪಿಸಿದರು.