ಕರ್ನಾಟಕ

karnataka

ETV Bharat / state

ಚನ್ನಪಟ್ಟಣದ ಅಚ್ಚರಿ ಅಭ್ಯರ್ಥಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದಾರೆ: ಸಿ.ಪಿ‌.ಯೋಗೇಶ್ವರ್ - C P Yogeshwar - C P YOGESHWAR

ಚನ್ನಪಟ್ಟಣದ ಉಪಚುನಾವಣೆಗೆ ಅಚ್ಚರಿ ಅಭ್ಯರ್ಥಿಯನ್ನು ಘೋಷಿಸುವುದಾಗಿ ಮಾಜಿ ಸಂಸದ ಡಿ.ಕೆ.ಸುರೇಶ್​ ಹೇಳಿಕೆಗೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯಿಸಿದರು.

former-minister-c-p-yogeshwar
ಮಾಜಿ ಸಚಿವ ಸಿ. ಪಿ‌ ಯೋಗೇಶ್ವರ್ (ETV Bharat)

By ETV Bharat Karnataka Team

Published : Jun 14, 2024, 6:10 PM IST

ಮಾಜಿ ಸಚಿವ ಸಿ. ಪಿ‌ ಯೋಗೇಶ್ವರ್ (ETV Bharat)

ರಾಮನಗರ:ಚನ್ನಪಟ್ಟಣಕ್ಕೆ ಅಚ್ಚರಿ ಅಭ್ಯರ್ಥಿ ಯಾರೆಂದು ನನಗೆ ಗೊತ್ತಿದೆ. ಈಗಾಗಲೇ ಅಚ್ಚರಿ ಅಭ್ಯರ್ಥಿ ಕೊಲೆ ಕೇಸಿನಲ್ಲಿ ಜೈಲು ಸೇರಿದ್ದಾರೆ ಎಂದು ಮಾಜಿ ಸಚಿವ ಸಿ.ಪಿ‌.ಯೋಗೇಶ್ವರ್ ಟೀಕಿಸಿದರು.

ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿಂದು ಮಾತನಾಡಿದ ಅವರು, ''ಮಾಜಿ ಸಂಸದರು ಅಚ್ಚರಿಯ ಅಭ್ಯರ್ಥಿ ಎಂದು ಹೇಳುತ್ತಿದ್ದರಲ್ಲಾ, ಆ ಅಭ್ಯರ್ಥಿ ಈಗ ಮರ್ಡರ್ ಕೇಸ್​ನಲ್ಲಿ ಸಿಲುಕಿಕೊಂಡು ಜೈಲಿನಲ್ಲಿದ್ದಾರೆ. ಅವರನ್ನೇ ಅಚ್ಚರಿ ಅಭ್ಯರ್ಥಿ ಮಾಡಬೇಕೆಂದಿದ್ದರು. ಅದು ಈಗ ಆಗಲ್ಲ, ಬಹುಶಃ ಇನ್ನೊಬ್ಬ ಅಚ್ಚರಿ ಅಭ್ಯರ್ಥಿಯನ್ನು ಹುಡುಕಬಹುದು ನೋಡೋಣ'' ಎಂದರು.

ಯಾರು ಸರ್ ಆ ನಟ ಎಂಬ ಮಾಧ್ಯಮದವರ ಪ್ರಶ್ನೆಗೆ, ''ಚಿತ್ರನಟರು, ಕಾಂಗ್ರೆಸ್​ ಪರ ಹೆಚ್ಚಿಗೆ ಪ್ರಚಾರವನ್ನು ಮಾಡಿದವರು. ಮುಂದಿನ ದಿನಗಳಲ್ಲಿ ಅವರನ್ನು ಕಾಂಗ್ರೆಸ್​ಗೆ ಸೇರಿಸಿಕೊಂಡು ಆ ಮೂಲಕ ಚುನಾವಣೆಯನ್ನು ಎದುರಿಸಬೇಕು ಎಂದು ನಮ್ಮ ಡಿ.ಕೆ.ಬ್ರದರ್ಸ್​ ಪ್ಲಾನ್ ಮಾಡಿದ್ರು. ಅವರು ಯಾರು ಅಂತ ನೀವೇ ಊಹೆ ಮಾಡಿಕೊಳ್ಳಿ'' ಎಂದು ತಿಳಿಸಿದರು.

''ಇದು ಹೊಸದು, ನಾನು ಮಾಧ್ಯಮಗಳ ಮೂಲಕ ನೋಡಿ ತಿಳಿದುಕೊಂಡಿದ್ದೇನೆ. ಆ ನಟನಿಗೂ ರಾಜಕೀಯಕ್ಕೆ ಬರಬೇಕೆಂಬ ಆಸೆ ಇತ್ತು. ಸಾರ್ವಜನಿಕ ಬದುಕಿಗೆ ಬರಬೇಕು ಅಂತ ಇತ್ತೇನೋ. ಪಾಪ ಅನಾಹುತ ಆಗೋಗಿದೆ'' ಎಂದರು.

ಮಂಡ್ಯ ಜಿಲ್ಲೆಯಿಂದ ಈಗಾಗಲೇ ಸಂಸದರಾಗಿ ಹೆಚ್.ಡಿ.ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಅಚ್ಚರಿ ಅಭ್ಯರ್ಥಿ ನಿಲ್ಲಿಸುವುದಾಗಿ ಮಾಜಿ ಸಂಸದ ಡಿ.ಕೆ.ಸುರೇಶ್ ಕೂಡ ಘೋಷಣೆ ಮಾಡಿದ್ದರು. ಇದಲ್ಲದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಬೇಕಾದರೆ ಬಲಿಷ್ಠ ಅಭ್ಯರ್ಥಿ ನಿಲ್ಲಿಸಬೇಕೆಂದು ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿತ್ತು.

ಚನ್ನಪಟ್ಟಣ ಬೈ ಎಲೆಕ್ಷನ್ ವಿಚಾರವಾಗಿ ಮಾತನಾಡಿದ ಸಿ.ಪಿ.ಯೋಗೇಶ್ವರ್​, ನಾಲ್ಕು ಕ್ಷೇತ್ರಗಳ ಪೈಕಿ ಚನ್ನಪಟ್ಟಣದಲ್ಲಿ ಬಿಜೆಪಿಗೆ ಅಸ್ತಿತ್ವ ಇದೆ. ಇಲ್ಲಿ ಬಿಜೆಪಿಗೆ ಹೆಚ್ಚು ಬಲ ಇದೆ. ಕನಕಪುರ, ರಾಮನಗರ, ಮಾಗಡಿಯಲ್ಲಿ ಜೆಡಿಎಸ್​ಗೆ ಶಕ್ತಿ ಇದೆ. ಆದರೆ, ಪಕ್ಷದ ವರಿಷ್ಠರು ಏನು ತೀರ್ಮಾನ ಮಾಡ್ತಾರೆ ನೋಡೊಣ ಎಂದು ಹೇಳಿದರು.

ವಸ್ತುಸ್ಥಿತಿ ಏನಿದೆ ಅನ್ನೋದನ್ನು ನಾನು ಹೇಳಿದ್ದೇನೆ. ಎರಡೂ ಪಕ್ಷಗಳು ಸೇರಿ ಚುನಾವಣೆ ಎದುರಿಸುತ್ತೇವೆ. ಎನ್​ಡಿಎ ಅಭ್ಯರ್ಥಿ ಯಾರೇ ಆದ್ರೂ ನಾವು ಕೆಲಸ ಮಾಡ್ತೇವೆ. ಲೋಕಸಭಾ ಚುನಾವಣೆಯಲ್ಲಿ ಜೊತೆಯಾಗಿ ಕೆಲಸ ಮಾಡಿ ಸಕ್ಸಸ್ ಸಿಕ್ಕಿದೆ. ಹಾಗಾಗಿ ಯಾವುದೇ ಗೊಂದಲ ಇಲ್ಲದೇ ಈ ಚುನಾವಣೆಯಲ್ಲೂ ಒಟ್ಟಾಗಿ ಕೆಲಸ ಮಾಡ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಎಂ. ಸಿ ಅಶ್ವಥ್ (ETV Bharat)

ದರ್ಶನ್ ಪ್ರಕರಣ: ಈ ಬಗ್ಗೆ ಕಾಂಗ್ರೆಸ್ ಮುಖಂಡ ಎಂ.ಸಿ.ಅಶ್ವಥ್ ಮಾತನಾಡಿ, ಮೊದಲಿನಿಂದಲೂ ಸಿ.ಪಿ.ಯೋಗೇಶ್ವರ್ ಅವರು ಇಂತಹ ಹೇಳಿಕೆ ನೀಡುವುದರಲ್ಲಿ ನಿಸ್ಸೀಮರು. ಯಾವುದೇ ಕಾರಣಕ್ಕೂ ನಟ ದರ್ಶನ್ ಅವರನ್ನು ಚನ್ನಪಟ್ಟಣ ಬೈ ಎಲೆಕ್ಷನ್​​ನಲ್ಲಿ ಕರೆತರುವ ಬಗ್ಗೆ ಚರ್ಚೆಯೇ ಆಗಿಲ್ಲ. ಆದರೆ ಡಿ.ಕೆ.ಬ್ರದರ್ಸ್‌ಗೆ ಕೆಟ್ಟ ಹೆಸರು ತರಲು ಈ ಹೇಳಿಕೆ ನೀಡಿದ್ದಾರೆ ಎಂದರು.

ಮೊದಲಿನಿಂದಲೂ ಅವರ ಮೇಲೆ ಇವರಿಗೆ ರಾಜಕೀಯ ದ್ವೇಷ‌ ಇದೆ. ಏನಾದರೂ ದಾಖಲೆ ಇದ್ದರೆ ಅವರು ಬಿಡುಗಡೆ ಮಾಡಲಿ. ಡಿ.ಕೆ.ಬ್ರದರ್ಸ್ ಬಗ್ಗೆ ಮಾತನಾಡುವ ನೈತಿಕತೆ ಇವರಿಗೆ ಇಲ್ಲ. ಮುಂದೆ ಸಿಎಂ ಆಗ್ತಾರೆಂಬ ಭಯಕ್ಕೆ ಈ ರೀತಿಯ ಹೇಳಿಕೆ ಕೊಡುತ್ತಾರೆ. ಉಪ ಚುನಾವಣೆಯಲ್ಲಿ ಡಿ.ಕೆ.ಸುರೇಶ್​ ಅವರನ್ನೇ ನಿಲ್ಲಿಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ:ಕೇಂದ್ರ ಸಚಿವರಾಗಿ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಹೆಚ್‌.ಡಿ.ಕುಮಾರಸ್ವಾಮಿಗೆ ಅದ್ಧೂರಿ ಸ್ವಾಗತ - H D Kumaraswamy

ABOUT THE AUTHOR

...view details