ಚಾಮರಾಜನಗರ:ಕೇರಳದ ಮಾಜಿ ರಾಜ್ಯಪಾಲ ಹಾಗೂ ಸಿಎಂ ಸಿದ್ದರಾಮಯ್ಯಗೆ ರಾಜಕೀಯ ಗುರುವಾಗಿದ್ದ ದಿವಂಗತ ಬಿ. ರಾಚಯ್ಯ ಅವರ ಪತ್ನಿ ಗೌರಮ್ಮ ಇಂದು ನಿಧನರಾಗಿದ್ದಾರೆ. ಇವರು ಕೊಳ್ಳೇಗಾಲ ಕ್ಷೇತ್ರದ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಅವರ ಮಾತೃಶ್ರೀಯವರಾಗಿದ್ದರು.
ಸುಮಾರು 90 ವರ್ಷ ವಯಸ್ಸಿನ ಗೌರಮ್ಮ ಅವರು ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು, ಇಂದು ಬೆಳಗ್ಗೆ 9 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಸ್ವಗ್ರಾಮ ಚಾಮರಾಜನಗರದ ಆಲೂರಿನಲ್ಲಿ ಶನಿವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕೆಲವು ತಿಂಗಳ ಹಿಂದೆ ಆಲೂರಿನಲ್ಲಿ ಬಿ.ರಾಚಯ್ಯ ಅವರ ಸ್ಮಾರಕ ಉದ್ಘಾಟನೆಯಾಗಿತ್ತು. ಸ್ಮಾರಕ ಉದ್ಘಾಟನೆಯನ್ನು ಸಿಎಂ ಸಿದ್ದರಾಮಯ್ಯ ನೆರವೇರಿಸಿದ್ದರು. ಆ ವೇಳೆ, ಸುಧೀರ್ಘವಾಗಿ ಹಿಂದಿನ ನೆನಪು ಮೆಲುಕು ಹಾಕಿದ ಸಿದ್ದರಾಮಯ್ಯ ಬಿ.ರಾಚಯ್ಯ ಅವರನ್ನು ತನ್ನ ರಾಜಕೀಯ ಗುರು ಎಂದು ನೆನೆದಿದ್ದರು. ವೇದಿಕೆಯಲ್ಲೇ ಇದ್ದ ಗೌರಮ್ಮ ಅವರ ಕೈರುಚಿಯನ್ನು ಸ್ಮರಿಸಿದ್ದರು.