ಶಿವಮೊಗ್ಗ: ರಾಜ್ಯ ಬಿಜೆಪಿಯ ಬಂಡಾಯ ನಾಯಕ ಕೆ.ಎಸ್.ಈಶ್ವರಪ್ಪನವರು ಇಂದು ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇಂದು ಬೆಳಗ್ಗೆ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ನಲ್ಲಿನ ಗಣಪನಿಗೆ ಬೆಂಬಲಿಗರು ಮತ್ತು ಕುಟುಂಬ ಸಮೇತ ಈಶ್ವರಪ್ಪ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಈಶ್ವರಪ್ಪ ಗೆಲುವಿಗೆ ಗಣಪನ ಭಜನೆ ಮಾಡಲಾಯಿತು.
ಪೂಜೆ ಬಳಿಕ ಅಲ್ಲಿಂದ ಜನ ಸಾಗರದ ಮೂಲಕ ನಾಮಪತ್ರ ಸಲ್ಲಿಸಲು ಈಶ್ವರಪ್ಪ ಮರೆವಣಿಗೆ ನಡೆಸಿದರು. ಗಾಂಧಿ ಬಜಾರ್ನ ಬಸವಣ್ಣನ ದೇವಾಲಯದ ಬಳಿ ಮೆರವಣಿಗೆ ಬರುವಷ್ಟರಲ್ಲಿ ನಾಮಪತ್ರ ಸಲ್ಲಿಕೆಯ ಮುಹೂರ್ತ ಮೀರುತ್ತಿದ್ದ ಹಿನ್ನೆಲೆಯಲ್ಲಿ ಮೆರವಣಿಗೆಯನ್ನು ಮಧ್ಯದಲ್ಲಿಯೇ ಬಿಟ್ಟು ಜಿಲ್ಲಾಧಿಕಾರಿಗಳ ಕಚೇರಿಗೆ ದೌಡಾಯಿಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಈಶ್ವರಪ್ಪನವರ ಪತ್ನಿ ಜಯಲಕ್ಷ್ಮೀ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಸಿದ್ದಲಿಂಗ ಶಾಸ್ತ್ರಿ ಹಾಗೂ ಉಮಾ ಎಂಬುವರು ಹಾಜರಿದ್ದರು.
ನಾಮಪತ್ರ ಸಲ್ಲಿಕೆಯ ನಂತರ ಮಾತನಾಡಿದ ಈಶ್ವರಪ್ಪನವರು, ''ಶಿವಮೊಗ್ಗ ಲೋಕಸಭಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ನಾಮಪತ್ರ ಸಲ್ಲಿಕೆಗೂ ಮುನ್ನ 8 ವಿಧಾನಸಭೆ ಕ್ಷೇತ್ರದಿಂದ ಜನರು ಬಂದಿದ್ದಾರೆ. ಮನೆ, ಮನೆಗೆ ಕಾರ್ಯಕರ್ತರು ಹೋಗಿ ಹಿಂದುತ್ವಕ್ಕೆ ಅನ್ಯಾಯ ಆಗಿರುವ ಬಗ್ಗೆ ಹೇಳುತ್ತಾರೆ. ಶಿವಮೊಗ್ಗದ ಜನರು ನನಗೆ ಬೆಂಬಲ ಕೊಡುತ್ತಾರೆ. ಈಗಾಗಲೇ 25-30 ಸಾವಿರ ಜನ ಬಂದು ಬೆಂಬಲ ಸೂಚಿಸಿದ್ದಾರೆ. ನಾಮಪತ್ರ ಸಲ್ಲಿಸಲ್ಲ ಎಂದವರಿಗೆ ಮೆರವಣಿಗೆಯೇ ಉತ್ತರ'' ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:ಈಶ್ವರಪ್ಪ ನಾಮಪತ್ರ ಹಿಂದಕ್ಕೆ ಪಡೆಯಲು ಇನ್ನೂ ಅವಕಾಶವಿದೆ: ವಿಜಯೇಂದ್ರ - B Y Vijayendra
ಕೇಸರಿಮಯವಾಗಿದ್ದ ಮೆರವಣಿಗೆ:ಈಶ್ವರಪ್ಪ ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಕೇಸರಿ ಬಾವುಟಗಳು ರಾರಾಜಿಸಿದವು. ಮೆರವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲುವ ತದ್ರೂಪಿಯೊಬ್ಬರು ಭಾಗವಹಿಸಿದ್ದು ವಿಶೇಷವಾಗಿತ್ತು. ಜೊತೆಗೆ ಮೆರವಣಿಗೆಯಲ್ಲಿ ವಿವಿಧ ಸಾಂಪ್ರದಾಯಿಕ ಕಲಾ ತಂಡಗಳು ಪಾಲ್ಗೊಂಡಿದ್ದವು.