ಬೆಂಗಳೂರು : ಪೆನ್ಡ್ರೈವ್ ವಿಚಾರ ನನಗೆ ಮೊದಲೇ ಗೊತ್ತಿದ್ದರೆ ಯಾವುದೇ ಕಾರಣಕ್ಕೂ ಪ್ರಜ್ವಲ್ಗೆ ಟಿಕೆಟ್ ಕೊಡುತ್ತಿರಲಿಲ್ಲ. ಬಿಜೆಪಿ ಜೊತೆಗೆ ನಾವು ಸುದೀರ್ಘ ಅವಧಿ ಇರಲು ಮೈತ್ರಿ ಮಾಡಿಕೊಂಡಿದ್ದೇವೆ. ಈ ಪ್ರಕರಣದಿಂದ ಬಿಜೆಪಿಯವರಿಗೆ ಮುಜುಗರ ಆಗುವುದಾದರೆ ಅವರೇ ತೀರ್ಮಾನ ಮಾಡಲಿ. ನಮ್ಮದೇನು ವಿರೋಧವಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಕರೆದಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮೈತ್ರಿ ಮುಂದುವರಿಸುವ ಕುರಿತು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ಅವರದ್ದು ರಾಷ್ಟ್ರೀಯ ಪಕ್ಷ. ಅವರು ಏನು ತೀರ್ಮಾನ ಮಾಡುತ್ತಾರೋ ಮಾಡಲಿ. ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮೈತ್ರಿ ಇರುತ್ತದೆಯೋ, ಇರುವುದಿಲ್ಲವೋ ಮುಂದೆ ನೋಡೋಣ ಎಂದರು.
ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಕಾಂಗ್ರೆಸ್ಗೆ ತಡೆಯಲು ಆಗಲಿಲ್ಲ. ಅದಕ್ಕಾಗಿ ಹೀಗೆಲ್ಲಾ ಅವರು ಮಾತನಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ನಮ್ಮ ಹೆಸರನ್ನು ಪದೇ ಪದೇ ಬಳಕೆ ಮಾಡಿಕೊಳ್ಳುತ್ತಿದ್ದರು. ಅದಕ್ಕಾಗಿ ನಾನೇ ಸ್ಟೇ ತಂದಿದ್ದೆ ಎಂದು ಪ್ರಶ್ನೆಯೊಂದಕ್ಕೆ ಹೆಚ್ಡಿಕೆ ಉತ್ತರಿಸಿದರು.
ರಾಜ್ಯಪಾಲರಿಗೂ ದೂರು : ನಮ್ಮ ಒತ್ತಾಯ ಪಾರದರ್ಶಕ ತನಿಖೆ ಆಗಬೇಕಷ್ಟೆ. ಈ ಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹಾಗಾಗಿ, ಸರ್ಕಾರದ ವಿರುದ್ಧ ಇನ್ನು ಎರಡು ದಿನಗಳಲ್ಲಿ ರಾಜ್ಯಪಾಲರಿಗೂ ದೂರು ಕೊಡುತ್ತೇವೆ ಎಂದು ಹೇಳಿದರು.
ಡಿ. ಕೆ ಶಿವಕುಮಾರ್ ಇತಿಹಾಸ ತೆಗೆದರೆ ಯಾವುದರಲ್ಲಿ ಎಕ್ಸ್‌ಪರ್ಟ್ ಅನ್ನೋದು ಎಲ್ಲರಿಗೆ ಗೊತ್ತಿದೆ. ಡಿ. ಕೆ ಶಿವಕುಮಾರ್ ಯಾವ ತರಹ ಬಂದಿದ್ದೀರಾ? ನಿನ್ನೆಯ ಮೊದಲು ಹೇಳಿಕೆ, ಆಮೇಲೆ ವಿಡಿಯೋ, ಬಳಿಕ ಬೈಟ್ ಕೊಟ್ಟಿದ್ದಾರೆ. ಅವರ ಮುಖ ನೋಡಿದ್ರೆ ಗೊತ್ತಾಗುತ್ತದೆ. ಬಾಲ ಸುಟ್ಟ ಬೆಕ್ಕಿನ ರೀತಿ ಡಿ ಕೆ ಶಿವಕುಮಾರ್ ಮುಖ ಆಗಿತ್ತು ಎಂದು ಹೆಚ್ಡಿಕೆ ವ್ಯಂಗ್ಯವಾಡಿದರು.
ಬೆಳಗಾವಿ ಸಾಹುಕಾರ್ ಮೇಲೆ ಇವರೇ ವಿಡಿಯೋ ರಿಲೀಸ್ ಮಾಡಿದ್ದರು. ಇದಕ್ಕೆ 30-40 ಕೋಟಿ ರೂ. ಖರ್ಚು ಮಾಡಿದ್ದೇನೆ ಅಂತ ಸಹ ಡಿ.ಕೆ ಶಿವಕುಮಾರ್ ಹೇಳಿರುವ ಆಡಿಯೋವಿದೆ ಎಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿ ಕೇಸ್ ಹೊರಬರಲು ಡಿಕೆಶಿ ಕಾರಣ ಎಂದು ಹೇಳಿದರು.