ಹಾಸನ: "ನಾನು ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಹೇಳಲ್ಲ. ರಾಜ್ಯ ಜನತೆ ಸರ್ಕಾರಗಳನ್ನು ಎಂದೂ ಸಹ ದಾರಿದ್ರ್ಯವಾಗಿ ಆಡಳಿತ ನಡೆಸುವಂತಹ ವಾತಾವರಣ ನಿರ್ಮಾಣ ಮಾಡಿಲ್ಲ" ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಹಾಸನ ತಾಲೂಕಿನ ಚನ್ನಂಗಿಹಳ್ಳಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯಿಸಿ, "ಆಡಳಿತ ನಡೆಸುತ್ತಿರುವವರು ನಾಡಿನ ಜನತೆ ಕಟ್ಟುತ್ತಿರುವ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ, ಜನರ ಸಮಸ್ಯೆಗಳು ದೊಡ್ಡಮಟ್ಟದಲ್ಲಿ ಬೆಳೆಯುತ್ತಿವೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ನಾನು ಹೇಳಲ್ಲ" ಎಂದರು.
"ರಾಜ್ಯದ ಖಜಾನೆ ಸಂಪತ್ಭರಿತವಾಗಿದೆ. ಆದರೆ ಇಲ್ಲಿ ಜನಸಾಮಾನ್ಯರ ಬದುಕನ್ನು ಕಟ್ಟುವುದಕ್ಕೆ ಯಾವ ರೀತಿ ಕಾರ್ಯಕ್ರಮ ಕೊಡಬೇಕು ಎಂಬುದು ಮುಖ್ಯ. ಇತ್ತೀಚಿಗೆ ರಾಜಕೀಯ ಸಂಘರ್ಷ ನಡೆಯುತ್ತಿದ್ದು, ಕೇಂದ್ರ-ರಾಜ್ಯ ಸರ್ಕಾರದ ನಡುವೆ ವಾಗ್ದಾಳಿ ನಡೆಯುತ್ತಿದೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಫೆ.16 ಬಜೆಟ್ ಮಂಡನೆಗೆ ಸಮಯ ನಿಗದಿ ಮಾಡಿದ್ದು, ವಿಧಾನಸಭೆ ಕಲಾಪದಲ್ಲಿ ಎಲ್ಲಾ ವಿಷಯಗಳ ಬಗ್ಗೆ ಮಾತನಾಡಲು ತೀರ್ಮಾನ ಮಾಡಿದ್ದೇನೆ" ಎಂದು ಹೇಳಿದರು.
"ಅಂಕಿ-ಅಂಶಗಳನ್ನಿಟ್ಟುಕೊಂಡು ಚರ್ಚೆ ಮಾಡ್ತೀನಿ. ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಹಣ ಕೊಡುವ ವ್ಯವಸ್ಥೆ ಆರಂಭವಾಗಿದ್ದು ಯಾವಾಗ? ಈಗ ದೊಡ್ಡಮಟ್ಟದಲ್ಲಿ ಕೇಂದ್ರದ ಮೇಲೆ ದಾಳಿ ನಡೆಯುತ್ತಿದೆ. ಈ ರಾಜ್ಯದಲ್ಲಿ ದಾಖಲೆಯ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿಗಳು ನೀವೇ. ಈಗ ಕೇಂದ್ರ ಸರ್ಕಾರದಿಂದ ಅನ್ಯಾಯ ಆಗಿದೆ ಎಂದು ಹೇಳಿತ್ತಿದ್ದೀರಿ" ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್ಡಿಕೆ ಅಸಮಾಧಾನ ಹೊರಹಾಕಿದ್ದಾರೆ.