ಬೆಂಗಳೂರು/ನವದೆಹಲಿ: ಅಂತಾರಾಷ್ಟ್ರೀಯ ಕುಸ್ತಿಪಟು ವಿನೇಶ್ ಫೋಗಟ್ ಅವರ ದೇಹ ತೂಕ 100 ಗ್ರಾಂ ಹೆಚ್ಚಳವಾಗಿದೆ ಎಂದು ಅವರನ್ನು ಒಲಿಂಪಿಕ್ಸ್ ಸ್ಪರ್ಧೆಯಿಂದ ಅನರ್ಹಗೊಳಿಸಿರುವುದು ದೊಡ್ಡ ಅನ್ಯಾಯ. ಒಲಿಂಪಿಕ್ಸ್ ಕೂಟದ ಕಾನೂನು ಪುನರ್ ವಿಮರ್ಶೆ ಮಾಡುವ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ನವದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ಸಾಮಾನ್ಯವಾಗಿ ಯಾವುದಾದರೂ ಆಟದ ಆರಂಭದಲ್ಲಿ ತೂಕ ಮತ್ತು ಇತರ ಅರ್ಹತೆಗಳನ್ನು ನೋಡುತ್ತಾರೆ. ಆದರೆ, ಪ್ರತಿಯೊಂದು ರೌಂಡ್ನಲ್ಲಿಯೂ ತೂಕ ನೋಡುವುದು ಬೇರೆ ಯಾವುದೇ ಆಟದಲ್ಲಿ ನೋಡಿಲ್ಲ. ಈ ಒಲಿಂಪಿಕ್ಸ್‌ನಲ್ಲಿ ತೂಕ ನೋಡಿರುವುದು ಪ್ರಶ್ನಾರ್ಹ. ಪ್ರತಿದಿನ ವ್ಯಕ್ತಿಯ ತೂಕದಲ್ಲಿ ನೂರರಿಂದ ಮುನ್ನೂರು ಗ್ರಾಂ ವ್ಯತ್ಯಾಸವಾಗುತ್ತಿರುತ್ತದೆ. ಅವರ ತೂಕದಲ್ಲಿ ನೂರು ಗ್ರಾಂ ಹೆಚ್ಚಾಗಿದೆ ಎಂದು ಸ್ಪರ್ಧೆಯಿಂದ ಅಮಾನತು ಮಾಡುವುದು ಸಮಂಜಸ ಅಲ್ಲ" ಎಂದರು.