ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಅವಳಿನಗರ ಪ್ರತ್ಯೇಕಗೊಂಡು ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಸಿಗುವ ಕಾಲ ಸನ್ನಿಹಿತವಾಗಿದೆ. ಅಂದುಕೊಂಡಂತೆ ಆಗಿದ್ದರೆ ಬೆಳಗಾವಿ ಅಧಿವೇಶನದ ವೇಳೆ ಕ್ಯಾಬಿನೆಟ್ ಸಭೆಯಲ್ಲಿ ಪ್ರತ್ಯೇಕ ಮಹಾನಗರ ಪಾಲಿಕೆಗೆ ಅಂತಿಮ ಮುದ್ರೆ ಬೀಳಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಹೀಗಿದ್ದರೂ ಕೂಡ ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ಮುದ್ರೆ ಬೀಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರತ್ಯೇಕ ಪಾಲಿಕೆಗೆ ದಶಕಗಳಿಂದ ಕೂಗು:ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ಬೆಳೆಯುತ್ತಿದಂತೆ ಧಾರವಾಡ ಪ್ರತ್ಯೇಕ ಪಾಲಿಕೆ ಬೇಕು ಎಂಬ ಕೂಗು ಕಳೆದ ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇತ್ತು. ಆದ್ರೆ ಅದು ಒಂದಾನೊಂದು ಕಾರಣದಿಂದ ಮುಂದೂಡಿಕೆಯಾಗುತ್ತಾ ಬಂದು ಈಗ ಪ್ರತ್ಯೇಕತೆಯ ಹೊಸ್ತಲಿಗೆ ಬಂದು ನಿಂತಿದೆ. ಇದೀಗ ರಾಜ್ಯ ಸರ್ಕಾರ ಅದಕ್ಕೆ ಬಹುತೇಕ ಒಪ್ಪಿಗೆ ನೀಡಿದೆ. ಪಾಲಿಕೆ ಸಾಮಾನ್ಯ ಸಭೆಯಲ್ಲೂ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಸ್ಥಾನ ನೀಡಿಕೆಗೆ ಒಪ್ಪಿಗೆಯ ನಿರ್ಣಯ ಕೈಗೊಂಡು ಅದನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಪ್ರತ್ಯೇಕ ಪಾಲಿಕೆ ರಚನೆಗೆ ರಾಜ್ಯ ಸಚಿವ ಸಂಪುಟದ ಅನುಮೋದನೆ, ರಾಜ್ಯ ಸರ್ಕಾರದಿಂದ ಅಧಿಕೃತ ಅಧಿಸೂಚನೆ ಹೊರಡಿಸುವುದು ಬಾಕಿ ಇದೆ.
ಮಹಾನಗರ ಪಾಲಿಕೆಗೆ ಮಾನದಂಡಗಳೇನು?:ಮಹಾನಗರ ಪಾಲಿಕೆ ರಚನೆಗೆ ಅದರದ್ದೇ ಆದ ಮಾನದಂಡಗಳಿವೆ.
- ಹೊಸ ಮಹಾನಗರ ಪಾಲಿಕೆ ರಚನೆಗೆ ಕನಿಷ್ಠ 3 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರಬೇಕಿದೆ.
- ಧಾರವಾಡ ಮಹಾನಗರ ಪಾಲಿಕೆಯಾಗಿ ರಚನೆಗೊಂಡಲ್ಲಿ ಅದರ ವ್ಯಾಪ್ತಿಯಲ್ಲಿ ಅಂದಾಜು 6 ಲಕ್ಷ ಜನಸಂಖ್ಯೆ ಇರಲಿದೆ.
- ಆದಾಯ ದೃಷ್ಟಿಯಿಂದಲೂ ಧಾರವಾಡ ನಿಗದಿಪಡಿಸಿದ ನಿಯಮಕ್ಕಿಂತ ಹೆಚ್ಚಿನದಾಗಿದೆ ಎಂದು ಪಾಲಿಕೆ ರಚನೆಗೆ ಅಗತ್ಯವಿರುವ ಪುರಾವೆ ನೀಡಲಾಗಿದೆ.
ಕೇಂದ್ರ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಸಕರು ಸಹ ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆಗೆ ಬೆಂಬಲಿಸಿದ್ದಾರೆ.
ಪ್ರತ್ಯೇಕ ಪಾಲಿಕೆಯಾದ್ರೆ ಆಗುವ ಅನುಕೂಲಗಳು:
- ಧಾರವಾಡ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದರೆ ಆಡಳಿತ ದೃಷ್ಟಿಯಿಂದ ಸುಲಭವಾಗಲಿದೆ.
- ಅವಳಿನಗರವಾದರೂ ಮಹಾನಗರ ಪಾಲಿಕೆಗೆ ಬರುವಷ್ಟೇ ಅನುದಾನ ಬರುತ್ತಿದ್ದು ಇದೀಗ ಪ್ರತ್ಯೇಕ ಪಾಲಿಕೆಯಾದರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಪ್ರತ್ಯೇಕ ಅನುದಾನ ಬರಲಿದ್ದು, ಅಭಿವೃದ್ಧಿಗೆ ಅನುಕೂಲ.
- ಪ್ರತ್ಯೇಕ ಪಾಲಿಕೆಯಿಂದ ಪ್ರತ್ಯೇಕ ಆಯುಕ್ತರು, ಅಧಿಕಾರಿಗಳು, ಸಿಬ್ಬಂದಿ ಬರಲಿದ್ದು ಕೆಲಸ ಕಾರ್ಯಗಳ ಸ್ವಂತ ಕೈಗೊಳ್ಳಲು ಸಹಕಾರಿ ಆಗಲಿದೆ.
ಎರಡನೇ ದೊಡ್ಡ ಮಹಾನಗರ ಪಾಲಿಕೆ ಪಟ್ಟ ಮಿಸ್:ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬೆಂಗಳೂರು ಬಿಟ್ಟರೆ ಎರಡನೇ ಅತೀ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಇದೆ. ಇದರಿಂದ 2ನೇ ದೊಡ್ಡ ಮಹಾನಗರಕ್ಕೆ ಪಟ್ಟ ಕೈ ತಪ್ಪಲಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಈ ಹಿಂದೆ 67 ವಾರ್ಡ್ಗಳನ್ನು ಹೊಂದಿತ್ತಾದರೂ ವಾರ್ಡ್‌ಗಳ ಪುನರ್ ವಿಂಗಡಣೆಯಿಂದ 82 ವಾರ್ಡ್‌ಗಳು ಅಸ್ತಿತ್ವಕ್ಕೆ ಬಂದಿದ್ದವು. ಬೆಂಗಳೂರು ನಂತರದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ ಎಂಬ ಖ್ಯಾತಿ ಪಡೆದಿತ್ತು. ಬೆಂಗಳೂರು ಮಾದರಿಯಲ್ಲಿ ಬೃಹತ್ ಮಹಾನಗರ ಪಾಲಿಕೆ ಪಟ್ಟಕ್ಕೆ ಎಲ್ಲ ರೀತಿಯ ಅರ್ಹತೆಯನ್ನು ಪಡೆದುಕೊಳ್ಳುವತ್ತ ಸಾಗಿತ್ತು. ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಯಾಗಿ ರಚನೆಗೊಂಡರೆ ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ ಪಟ್ಟ ತಪ್ಪಲಿದ್ದು, ಬೃಹತ್ ಮಹಾನಗರ ಪಾಲಿಕೆ ಅವಕಾಶದಿಂದಲೂ ದೂರವಾಗಲಿದೆ.