ಚಿಕ್ಕಮಗಳೂರು:ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಬೀಟಮ್ಮ ಗ್ಯಾಂಗ್ ಆನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಚಿಕ್ಕಮಗಳೂರು ತಾಲೂಕಿನ ತೋರಣಮಾವು ಗ್ರಾಮಕ್ಕೆ ಈ ಕಾಡಾನೆಗಳು ಲಗ್ಗೆ ಇಟ್ಟವೆ. ಗ್ರಾಮದ ಸುತ್ತಮುತ್ತ ಈಗ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಹೈಅಲರ್ಟ್ ಘೋಷಣೆ ಮಾಡಿ, ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಅನಾವಶ್ಯಕವಾಗಿ ರಸ್ತೆಗಿಳಿಯದಂತೆ ಸೂಚಿಸಿದ್ದಾರೆ. ಬೆಳಗ್ಗೆ ಬೇಗನೆ ಕಾರ್ಮಿಕರು ಕಾಫಿ ತೋಟಕ್ಕೆ ಹೋಗದಿರಲು ಕೂಡ ತಿಳಿಸಿದ್ದಾರೆ. ಆನೆಗಳ ಹಿಂಡು ಯಾವುದೇ ಸಮಯದಲ್ಲೂ ಕಾಫಿ ತೋಟಕ್ಕೆ ನುಗ್ಗುವ ಸಾಧ್ಯತೆ ಇದೆ ಎಂದು ಗ್ರಾಮಗಳಿಗೆ ತೆರಳಿ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.
ಪ್ರಮುಖವಾಗಿ ಐದಾರು ಗ್ರಾಮಗಳ ವ್ಯಾಪ್ತಿಯಲ್ಲಿ 24 ಆನೆಗಳ ಸಂಚಾರ ನಿರಂತರವಾಗಿ ಸಾಗಿದ್ದು, ತೋರಣ ಮಾವು, ಕೋಡುವಳ್ಳಿ, ಗೌತಮೇಶ್ವರ, ಅಣೂರು, ದಿಣ್ಣೆಕೆರೆ ಗ್ರಾಮಗಳಲ್ಲಿನ ಜನರಲ್ಲಿ ಆತಂಕ ಮನೆ ಮಾಡಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಾಡಾನೆಗಳು ಸಂಚಾರ ಮಾಡುತ್ತಿದ್ದು, ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆಯನ್ನು ಜನರಿಗೆ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರಿಗೆ ತಂದೊಡ್ಡಿವೆ.
ಆನೆ ದಾಳಿ ಭೀತಿಯಿಂದ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಗ್ರಾಮಸ್ಥರು ಮನೆಗಳಿಂದ ಹೊರಬರಲಾಗುತ್ತಿಲ್ಲ. ನಮ್ಮ ಗೋಳನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ. ಇತ್ತೀಚೆಗಷ್ಟೇ ನೆಲ್ಲೂರು ಪಕ್ಕದ ಮತ್ತಾವರ ಗ್ರಾಮದ ಸುತ್ತಮುತ್ತ ದಾಳಿ ಮಾಡಿರುವ ಆನೆಗಳು ಭಾರಿ ಪ್ರಮಾಣದ ಬೆಳೆ ಹಾನಿಪಡಿಸಿದ್ದವು. ಆಲ್ದೂರು ಮತ್ತು ನೆಲ್ಲೂರು ಗ್ರಾಮಗಳಲ್ಲಿ ಹಿಂಡು ಹಿಂಡಾಗಿ ಆನೆಗಳು ಕಾಣಿಸಿಕೊಂಡಿದ್ದವು. ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿರುವುದನ್ನು ಕಂಡು ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.