ಬೆಳಗಾವಿ:ವೀರರಾಣಿ ಚೆನ್ನಮ್ಮನ 200ನೇ ವಿಜಯೋತ್ಸವಕ್ಕೆ ಜನರ ದಂಡು ಕಿತ್ತೂರಿನತ್ತ ಹರಿದು ಬರುತ್ತಿದೆ. ಉತ್ಸವದ ಅಂಗವಾಗಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಸಿರಿಧಾನ್ಯಗಳಲ್ಲಿ ಅರಳಿದ ಗುರು ಮಡಿವಾಳೇಶ್ವರರ ಭಾವಚಿತ್ರ, ಮರಳಿನಲ್ಲಿ ಅರಳಿದ ರಾಣಿ ಚೆನ್ನಮ್ಮಾಜಿ ಚಿತ್ರ ಅದ್ಭುತವಾಗಿ ಮೂಡಿಬಂದಿವೆ.
ಹೌದು, ಕಿತ್ತೂರು ಪಟ್ಟಣದ ಕೋಟೆ ಆವರಣದಲ್ಲಿರುವ ಗ್ರಾಮದೇವಿ ದೇವಸ್ಥಾನದ ಬಳಿ ತೋಟಗಾರಿಕಾ ಇಲಾಖೆ ವತಿಯಿಂದ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಬ್ರಿಟಿಷರ ವಿರುದ್ಧ ದಿಗ್ವಿಜಯ ಸಾಧಿಸಿ 200ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕಿತ್ತೂರು ನಾಡಿನ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಕಲಾಕೃತಿಗಳನ್ನು ಈ ಬಾರಿ ತಯಾರಿಸಲಾಗಿದೆ.
ಅದರಲ್ಲೂ ಸಿರಿಧಾನ್ಯಗಳಲ್ಲಿ ತಯಾರಿಸಿರುವ ಕಿತ್ತೂರು ಸಂಸ್ಥಾನದ ರಾಜಗುರು ಮಡಿವಾಳೇಶ್ವರರ ಭಾವಚಿತ್ರವು ನೋಡುಗರ ಗಮನ ಸೆಳೆಯುತ್ತಿದೆ. ಜೋಳ, ನವಣೆ, ಚನ್ನಂಗಿ, ರಾಗಿ, ಸಾವೆ ಬಳಸಿ 6 ಅಡಿ ಎತ್ತರದ ಕಲಾಕೃತಿ ತಯಾರಿಸಲಾಗಿದೆ. ಕುಳಿತು ಆಶೀರ್ವಾದ ಮಾಡುತ್ತಿರುವ ಭಂಗಿಯು ಮಡಿವಾಳ ಅಜ್ಜನನ್ನೇ ಈ ಮೂರ್ತಿ ನೆನಪಿಸುತ್ತಿದೆ. ಜನ ಭಕ್ತಿಯಿಂದ ಕೈ ಮುಗಿಯುತ್ತಿರುವುದು ಸಾಮಾನ್ಯವಾಗಿದೆ.
ಮರಳಿನಲ್ಲಿ ರಾಣಿ ಚೆನ್ನಮ್ಮಾಜಿ ಡಾಲು ಮತ್ತು ಕತ್ತಿ ಹಿಡಿದಿರುವ ಹಾಗೂ ಪಕ್ಕದಲ್ಲಿ ಕಿತ್ತೂರು ಸಂಸ್ಥಾನದ ಲಾಂಛನ ನಂದಿಧ್ವಜ ಇರುವ ಕಲಾಕೃತಿ ಪ್ರಮುಖ ಆಕರ್ಷಣೆಯಾಗಿದೆ. ಮೈಸೂರಿನ ಕಲಾವಿದೆ ಗೌರಿ ಇದನ್ನು ತಯಾರಿಸಿದ್ದಾರೆ. ಇನ್ನು "ಜೈಜವಾನ್ ಜೈಕಿಸಾನ್" ಘೋಷವಾಕ್ಯ ಇರುವ, ಹೆಗಲ ಮೇಲೆ ನೇಗಿಲು, ಕೈಯಲ್ಲಿ ಬಂದೂಕು ಹಿಡಿದ ವ್ಯಕ್ತಿ ಜಗತ್ತಿಗೆ ಅನ್ನ ಕೊಡುವ ರೈತನೂ ಹೌದು, ದೇಶದ ಗಡಿ ಕಾಯುವ ಸೈನಿಕನೂ ಹೌದು ಎಂಬ ಸಂದೇಶವನ್ನು ಮನೋಜ್ಞವಾಗಿ ಕಟ್ಟಿ ಕೊಟ್ಟಿದ್ದಾರೆ. ಬೇಟಿ ಬಚಾವೋ, ಬೇಟಿ ಪಡಾವೋ ಕಲಾಕೃತಿ ಕೂಡ ಹೆಣ್ಣು ಮಕ್ಕಳನ್ನು ಓದಿಸುವುದು ಮತ್ತು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂಬುದನ್ನು ಜಾಗೃತಿಗೊಳಿಸುತ್ತಿದೆ.
ಇನ್ನು, ಚೆನ್ನಮ್ಮಾಜಿ ಯುದ್ಧದಲ್ಲಿ ಹೋರಾಡುತ್ತಿರುವ ಸನ್ನಿವೇಷವನ್ನು ರಂಗೋಲಿಯಲ್ಲಿ ಕಟ್ಟಿ ಕೊಡಲಾಗಿದೆ. ವಿವಿಧ ಬಣ್ಣಗಳ ಸೇವಂತಿ ಹೂವುಗಳಲ್ಲಿ ಕಿತ್ತೂರಿನ ಕೋಟೆ ಕಲಾಕೃತಿ, ತೆಂಗಿನಲ್ಲಿ ಅರಳಿರುವ ರವೀಂದ್ರನಾಥ ಟ್ಯಾಗೋರ, ಗಣೇಶ, ಆಂಜನೇಯ, ಬುದ್ಧ ಅವರ ಪ್ರತಿರೂಪಗಳು, ಚಕ್ಕಡಿ, ಸಂಗೀತ ವಾದ್ಯಗಳು ಸೇರಿ 57 ಅಲಂಕಾರಿಕ ವಸ್ತುಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ. ಇದರ ಜೊತೆಗೆ ಕಲ್ಲಂಗಡಿಯಲ್ಲಿ ಯೋಗಿ ಶಿವ, ಬುದ್ಧ, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸ್ವಾಮಿ ವಿವೇಕಾನಂದ ಡಾ. ಬಿ.ಆರ್. ಅಂಬೇಡ್ಕರ್, ಡಾ. ರಾಜಕುಮಾರ ಸೇರಿ ಮತ್ತಿತರ ಮಹನೀಯರ ಚಿತ್ರಗಳು ಅದ್ಭುತವಾಗಿ ಮೂಡಿಬಂದಿವೆ.