ಬೆಂಗಳೂರು: ಪಂಚ ಗ್ಯಾರಂಟಿಯ ಆರ್ಥಿಕ ಹೊರೆ ಮಧ್ಯೆ ಕಾಂಗ್ರೆಸ್ ಸರ್ಕಾರ ರಾಜ್ಯದ ಹಣಕಾಸು ಸ್ಥಿತಿಯನ್ನು ನಿಭಾಯಿಸಲು ಕಸರತ್ತು ನಡೆಸುತ್ತಿದೆ. 2024-25ನೇ ಸಾಲಿನಲ್ಲಿ ಸರ್ಕಾರ ಅಧಿಕ ಸಾಲದ ಮೊರೆ ಹೋಗಲಿದೆ. ಇದೀಗ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ಮುಕ್ತಾಯವಾಗಿದೆ.
ಪಂಚ ಗ್ಯಾರಂಟಿ ಹೊರೆಯ ಹಿನ್ನೆಲೆ ಹಣಕಾಸನ್ನು ನಿರ್ವಹಿಸಲು ಸಿಎಂ ಸಿದ್ದರಾಮಯ್ಯ ಈ ಬಾರಿಯೂ ಸಾಲವನ್ನೇ ನೆಚ್ಚಿಕೊಂಡಿದ್ದಾರೆ. ಇದಕ್ಕಾಗಿ 2024-25ನೇ ಸಾಲಿನಲ್ಲಿ ಅಂದಾಜು 1,05,246 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿದೆ. ಅದರಂತೆ ಕೇಂದ್ರ ಸರ್ಕಾರದಿಂದ 6,855 ಕೋಟಿ ರೂ. ಸಾಲ ಪಡೆಯಲು ಅಂದಾಜಿಸಲಾಗಿದೆ. ಬಹಿರಂಗ ಮಾರುಕಟ್ಟೆ ಮೂಲಕ 96,840ಕೋಟಿ ರೂ. ಸಾಲ ಮಾಡಲು ಮುಂದಾಗಿದೆ.
ಮೊದಲ ತ್ರೈಮಾಸಿಕದಲ್ಲಿ ಮುಕ್ತ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಇಲ್ಲ:ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈ ಮಾಸಿಕದಲ್ಲಿ ರಾಜ್ಯ ಸರ್ಕಾರ ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ರಾಜ್ಯ ಅಭಿವೃದ್ಧಿ ಸಾಲದ ರೂಪದಲ್ಲಿ ಯಾವುದೇ ಸಾಲವನ್ನು ಎತ್ತುವಳಿ ಮಾಡಿಲ್ಲ. ಏಪ್ರಿಲ್-ಜೂನ್ ಮೊದಲ ತ್ರೈಮಾಸಿಕದಲ್ಲೇ 10,000 ಕೋಟಿ ರೂ. ಸಾಲ ಮಾಡುವುದಾಗಿ ರಾಜ್ಯ ಸರ್ಕಾರ ಆರ್ಬಿಐಗೆ ಮಾಹಿತಿ ನೀಡಿತ್ತು. ಆದರೆ, ಮೊದಲ ತ್ರೈಮಾಸಿಕದಲ್ಲಿ ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡಿಲ್ಲ.
ಕಳೆದ ವರ್ಷವೂ ರಾಜ್ಯ ಸರ್ಕಾರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕ ಅಂದರೆ ಮೊದಲ ಆರು ತಿಂಗಳು ಆರ್ಬಿಐ ಮೂಲಕ ಸಾಲವನ್ನೇ ಎತ್ತುವಳಿ ಮಾಡಿರಲಿಲ್ಲ. ಈ ಬಾರಿನೂ ಮೊದಲ ತ್ರೈಮಾಸಿಕದಲ್ಲಿ ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಸಾಲದ ಮೊರೆ ಹೋಗಿಲ್ಲ. ಎರಡನೇ ತ್ರೈಮಾಸಿಕದಲ್ಲಿ ಮುಕ್ತ ಮಾರುಕಟ್ಟೆ ಮೂಲಕ 10,000 ಕೋಟಿ ರೂ. ಸಾಲ ಮಾಡುವುದಾಗಿ ಆರ್ಜಿಐಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಆಗಸ್ಟ್ 6ರಿಂದ ಸಾಲ ಎತ್ತುವಳಿ ಮಾಡುವುದಾಗಿ ತಿಳಿಸಿದೆ.
ಸಾರ್ವಜನಿಕ ಸಾಲದ ಮೊರೆ:ಆದರೆ, ರಾಜ್ಯ ಸರ್ಕಾರ ಇತರ ಸಾಲದ ಮೂಲವಾದ ಸಾರ್ವಜನಿಕ ಸಾಲದ ಮೊರೆ ಹೋಗಿದೆ. ಈಗಾಗಲೇ ರಾಜ್ಯ ಸರ್ಕಾರ ಸುಮಾರು 3,000 ಕೋಟಿಗೂ ಅಧಿಕ ಸಾಲ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಸಾರ್ವಜನಿಕ ಸಾಲವಾಗಿ 660 ಕೋಟಿ ರೂ. ಸಾಲ ಮಾಡಿದೆ. ಇನ್ನು ಮೇ ತಿಂಗಳಲ್ಲಿ 1,455 ಕೋಟಿ ರೂ. ಸಾರ್ವಜನಿಕ ಸಾಲ ಮಾಡಿರುವುದಾಗಿ ಆರ್ಥಿಕ ಇಲಾಖೆ ಅಂಕಿ-ಅಂಶ ನೀಡಿದೆ.
ಕಳೆದ ಬಾರಿಯೂ ರಾಜ್ಯ ಸರ್ಕಾರ ಮೊದಲಿಗೆ ಸಾರ್ವಜನಿಕ ಸಾಲದ ರೂಪದಲ್ಲಿ ಸಾಲವನ್ನು ಮಾಡಿತ್ತು. ಬಳಿಕ ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಸಾಲದ ಎತ್ತುವಳಿ ಮಾಡಿತ್ತು. ಈ ಬಾರಿಯೂ ರಾಜ್ಯ ಸರ್ಕಾರ ಸೀಮಿತ ಸಂಪನ್ಮೂಲದ ಕಾರಣ ಹೆಚ್ಚಿಗೆ ಸಾಲವನ್ನೇ ನೆಚ್ಚಿಕೊಂಡಿದ್ದು, ಮುಂದಿನ ತ್ರೈ ಮಾಸಿಕದಲ್ಲಿ ನಿರಂತರವಾಗಿ ಸಾಲ ಎತ್ತುವಳಿ ಮಾಡಲಾಗುವುದು ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಚರ್ಚಿಸಿ ತೀರ್ಮಾನ: ಸಚಿವ ಎಂ.ಬಿ.ಪಾಟೀಲ್