ಉಡುಪಿ:ಜಿಲ್ಲೆಯ ಮಲ್ಪೆ ಬಾಪುತೋಟ ಬಳಿಯ ಮೀನುಗಾರಿಕಾ ಬಂದರಿನ ಸೇತುವೆ ಪಕ್ಕದ ದಕ್ಕೆಯ ಸಮೀಪ ನಿಲ್ಲಿಸಲಾಗಿದ್ದ ಬೋಟ್ಗೆ ಗುರುವಾರ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ಇದರಿಂದಾಗಿ ಅಂದಾಜು 15 ಲಕ್ಷ ರೂ.ಗಳಷ್ಟು ನಷ್ಟವಾಗಿದೆ ಎಂದು ತಿಳಿದು ಬಂದಿದೆ.
ಮಲ್ಪೆಯ ಜನಾರ್ದನ ಟಿ.ಕಾಂಚನ್ ಎಂಬವರಿಗೆ ಸೇರಿದ ‘ರವಿಪ್ರಕಾಶ್’ ಸಣ್ಣಟ್ರಾಲ್ (ಫಿಶಿಂಗ್) ಬೋಟು ಸುಟ್ಟುಹೋಗಿದೆ. ಮೀನುಗಾರಿಕೆ ಮುಗಿಸಿ ಬಂದು ಬೋಟ್ ಅನ್ನು ದಕ್ಕೆಯಲ್ಲಿ ನಿಲ್ಲಿಸಲಾಗಿತ್ತು. ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಬೋಟಿನ ಸುತ್ತ ಸುಮಾರು 25ರಿಂದ 30 ಬೋಟುಗಳು ನಿಂತಿದ್ದವು. ರಾತ್ರಿ ಸಮಯ ಸಮುದ್ರದ ನೀರಿನ ಮಟ್ಟ ಏರಿಕೆ ಇರುವುದರಿಂದ ಇತರ ಯಾವುದೇ ಬೋಟ್ಗಳಿಗೆ ಬೆಂಕಿ ವ್ಯಾಪಿಸಿಲ್ಲ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.