ಶಿವಮೊಗ್ಗ:ದೇಶದಲ್ಲಿ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಈ ವೇಳೆ ಚುನಾವಣಾಧಿಕಾರಿಗಳ ಕಚೇರಿಯಿಂದ ಯಾವುದೇ ರೀತಿಯ ಅನುಮತಿ ಪಡೆಯದೆ, ರಾಜಕೀಯ ಸಭೆ ನಡೆಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಕೆ. ಎಸ್. ಈಶ್ವರಪ್ಪ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಕೆ.ಎಸ್. ಈಶ್ವರಪ್ಪ ವಿರುದ್ಧ ಎಫ್‌ಐಆರ್ ದಾಖಲು - K S Eshwarappa
ಲೋಕಸಭಾ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.
Published : Apr 7, 2024, 7:01 AM IST
ಏಪ್ರಿಲ್ 5 ರಂದು ತೀರ್ಥಹಳ್ಳಿ ತಾಲೂಕು ನೊಣಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಬುತೀರ್ಥದ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಿದ್ದರು. ಬಳಿಕ ಹತ್ತಿರದಲ್ಲೇ ಇರುವ ಅರ್ಚಕರ ಮನೆಗೆ ಹೋಗಿ, ಅಲ್ಲಿ ಅವರ ಮನೆಯ ಅಂಗಳದಲ್ಲಿ ಸುಮಾರು 50 ರಿಂದ 70 ಜನರನ್ನು ಸೇರಿಸಿಕೊಂಡು 50 ಕುರ್ಚಿಗಳು ಹಾಗೂ ಹ್ಯಾಂಡ್ ಮೈಕ್ ಒಳಗೊಂಡಂತೆ ಸಣ್ಣ ವೇದಿಕೆ ರೀತಿಯಲ್ಲಿ ಸಭೆ ನಡೆಸಿ, ಅವರು ರಾಜಕೀಯ ಪ್ರೇರಿತ ಭಾಷಣವನ್ನು ಮಾಡಿದ್ದಾರೆ. ಈ ಕಾರ್ಯಕ್ರಮ ನಡೆಸಲು ಚುನಾವಣಾಧಿಕಾರಿಗಳ ಕಚೇರಿಯಿಂದ ಯಾವುದೇ ರೀತಿಯ ಅನುಮತಿ ಪಡೆದಿಲ್ಲ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಅಸಂಜ್ಞೆಯ ಅಪರಾಧ ಪ್ರಕರಣವಾದ್ದರಿಂದ ನ್ಯಾಯಾಲಯದ ಅನುಮತಿ ಪಡೆದು ಕೆ.ಎಸ್ ಈಶ್ವರಪ್ಪ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.