ಕರ್ನಾಟಕ

karnataka

ETV Bharat / state

ಪತಿಗೆ ಮಾನಸಿಕ ಕಿರುಕುಳ ಆರೋಪ: ಸ್ಯಾಂಡಲ್​ವುಡ್ ಪೋಷಕ ನಟಿ ವಿರುದ್ಧ ಎಫ್ಐಆರ್ - FIR AGAINST SANDALWOOD ACTRESS

ಪತಿಗೆ ಮಾನಸಿಕ ಕಿರುಕುಳ ಆರೋಪದ ಮೇಲೆ ಕನ್ನಡ ಚಿತ್ರರಂಗದ ಪೋಷಕ ನಟಿ ಶಶಿಕಲಾ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

FIR AGAINST SANDALWOOD ACTRESS
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Jan 26, 2025, 1:40 PM IST

ಬೆಂಗಳೂರು:ಪತಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವ ಆರೋಪದಡಿ ಸ್ಯಾಂಡಲ್​ವುಡ್ ಪೋಷಕ ನಟಿ ಶಶಿಕಲಾ ವಿರುದ್ಧ ಪ್ರಕರಣ ದಾಖಲಾಗಿದೆ. ಶಶಿಕಲಾ ಅವರ ಪತಿ ಹಾಗೂ ನಿರ್ದೇಶಕ ಹರ್ಷವರ್ಧನ್ ಟಿ.ಜಿ. ನೀಡಿರುವ ದೂರಿನ ಅನ್ವಯ ವಿದ್ಯಾರಣ್ಯಪುರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ದೂರಿನ ವಿವರ:2021ರಲ್ಲಿ ಸಿನಿಮಾ ಶೂಟಿಂಗ್​ಗೆ ಕಲಾವಿದೆಯಾಗಿ ಬಂದಾಗ ಶಶಿಕಲಾ ಪರಿಚಯವಾಗಿತ್ತು. ಬಳಿಕ ಅವರೇ ನನ್ನ ಫೋನ್ ನಂಬರ್ ಪಡೆದಿದ್ದರು. ತನ್ನೊಂದಿಗೆ ರಿಲೇಶನ್​ಶಿಪ್ ಹೊಂದಿದರೆ ತಾವೂ ಸಹ ಸಿನಿಮಾದಲ್ಲಿ ಹಣ ಹೂಡಿಕೆ ಮಾಡುವುದಾಗಿ ನನಗೆ ಅವರು ನಂಬಿಸಿದ್ದರು. ತನ್ನ ಜೊತೆ ರಿಲೇಶನ್​ಶಿಪ್​ ಹೊಂದುವಂತೆ ಬಲವಂತ ಮಾಡಿದರು. ಸಿನಿಮಾ ನಿರ್ಮಾಣ ಮಾಡುತ್ತಾರೆಂದು ಆಸೆಯಿಂದ ನಾನು ಒಪ್ಪಿಕೊಂಡೆ. ಆದರೆ ನಾನು ಮೊದಲೇ ಅವರಿಗೆ ನಿಮ್ಮನ್ನು ಮದುವೆಯಾಗಲು ಆಗುವುದಿಲ್ಲ ಎಂದು ಹೇಳಿದ್ದೆ. ಅವರು ಸಹ ಒಪ್ಪಿದ್ದರು. ಆದರೆ ಕೆಲವು ದಿನಗಳ ಬಳಿಕ ಶಶಿಕಲಾ ಅವರು ಮದುವೆ ಆಗುವಂತೆ ಬಲವಂತ ಮಾಡಿದರು. ತಮ್ಮಿಬ್ಬರ ನಡುವಿನ ಕಾಲ್ ರೆಕಾರ್ಡ್ಸ್ ಇಟ್ಟುಕೊಂಡು ಬೆದರಿಸಿದ್ದರು ಎಂದು ದೂರಿನಲ್ಲಿ ಹರ್ಷವರ್ಧನ್ ಆರೋಪಿಸಿದ್ದಾರೆ.

ಹಲ್ಲೆ ಆರೋಪ:ಮದುವೆಗೆ ಒಪ್ಪದಿದ್ದಾಗ ನಾಗರಭಾವಿಯಲ್ಲಿರುವ ಕಚೇರಿಗೆ ಬಂದು ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದರು. ಈ ಬಗ್ಗೆ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗೆ ತಾನು ದೂರು ನೀಡಿದ್ದೆ. ಬಳಿಕ ಇಬ್ಬರಿಗೂ ಪೊಲೀಸರು ಬುದ್ದಿವಾದ ಹೇಳಿ ಕಳಿಸಿದ್ದರು. ಆದರೆ 2022ರಲ್ಲಿ ಶಶಿಕಲಾ ನೀಡಿದ್ದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು, ನನ್ನನ್ನು ಬಂಧಿಸಿದ್ದರು. ಜೈಲಿನಿಂದ ಹೊರ ಬಂದ ಬಳಿಕವೂ ನನಗೆ ಸಿನಿಮಾ ನಿರ್ದೇಶನ ಮಾಡಲು ಬಿಡುವುದಿಲ್ಲ ಎಂದು ಶಶಿಕಲಾ ಬೆದರಿಸಿದ್ದರು ಎಂದು ಹರ್ಷವರ್ಧನ್ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.

ಆ ಸಂದರ್ಭದಲ್ಲಿ "ಸುಮ್ಮನೆ ಸಿನಿಮಾ ಕರಿಯರ್ ಹಾಳಾಗುವುದು ಬೇಡ, ಅವರನ್ನು ಮದುವೆಯಾಗು'' ಎಂದು ನಿರ್ಮಾಪಕರು ನೀಡಿದ್ದ ಸಲಹೆ ಮೇರೆಗೆ 2022ರ ಮಾರ್ಚ್‌ನಲ್ಲಿ ಶಶಿಕಲಾ ಅವರನ್ನು ಮದುವೆಯಾದೆ. ಆದರೆ ಮದುವೆಯಾದ ಕೆಲ ದಿನಗಳ ನಂತರ ನಿರ್ಮಾಪಕರು, ನಿರ್ದೇಶಕ ಹಾಗೂ ಕಲಾವಿದರು ಮನೆಗೆ ಬಂದು ಹೋಗಲಾರಂಭಿಸಿದ್ದರು. ಅದನ್ನು ಪ್ರಶ್ನಿಸಿದಾಗ ತಮ್ಮನ್ನು ಮನೆಯಿಂದ ಹೊರಹಾಕುತ್ತಿದ್ದರು‌. ಒಂದೆರಡು ಗಂಟೆಗಳ ಬಳಿಕ ತಾವೇ ಮನೆಯೊಳಗೆ ಸೇರಿಸುತ್ತಿದ್ದರು ಎಂದು ಹರ್ಷವರ್ಧನ್ ಆರೋಪ ಮಾಡಿದ್ದಾರೆ.

ಈ ನಡುವೆ ಅಮ್ಮನ ಮಡಿಲು ಹೆಸರಿನಲ್ಲಿ ಶಶಿಕಲಾ ಅನಾಥಾಶ್ರಮ ಆರಂಭಿಸಿದ್ದರು. ಯಾಕೆ ಎಂದು ಪ್ರಶ್ನಿಸಿದಾಗ, ''ಕಪ್ಪು ಹಣವನ್ನು ಬದಲಾಯಿಸುವ ಅವಕಾಶ ಸಿಗುತ್ತದೆ'' ಎಂದಿದ್ದರು. ಅಲ್ಲದೆ, 2024ರ ಆಗಸ್ಟ್‌ನಲ್ಲಿ ತಮ್ಮನ್ನು ಮನೆಯಿಂದ ಹೊರಹಾಕಿರುವ ಶಶಿಕಲಾ, ಯೂಟ್ಯೂಬ್ ಚಾನೆಲ್‌ವೊಂದರ ಸಿಬ್ಬಂದಿಯೊಂದಿಗೆ ಸೇರಿ ತನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಅವರೂ ಸಹ ನನ್ನೊಂದಿಗೆ ಬದುಕುತ್ತಿಲ್ಲ, ನನಗೂ ನೆಮ್ಮದಿಯಾಗಿರಲು ಬಿಡುತ್ತಿಲ್ಲ ಎಂದು ಹರ್ಷವರ್ಧನ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹರ್ಷವರ್ಧನ್ ನೀಡಿರುವ ದೂರಿನ ಅನ್ವಯ ಶಶಿಕಲಾ ಸೇರಿದಂತೆ ಇಬ್ಬರ ವಿರುದ್ಧ ವಿದ್ಯಾರಣ್ಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಭವ್ಯಾ ಎಲಿಮಿನೇಟ್​​: 'ಬಿಗ್​ ಬಾಸ್​​​ ಕನ್ನಡ 11'ರ ಟ್ರೋಫಿ ಎತ್ತೋದ್ಯಾರು?

ABOUT THE AUTHOR

...view details