ಕರ್ನಾಟಕ

karnataka

ETV Bharat / state

ಗುಂಡಿಕ್ಕಿ ಕೊಲ್ಲಬೇಕು ಹೇಳಿಕೆ: ಕೆಎಸ್ ಈಶ್ವರಪ್ಪ ವಿರುದ್ಧ FIR ದಾಖಲು - FIR

ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿ ಎಂದು ಹೇಳಿಕೆ ಕೊಟ್ಟಿರುವ ಬಿಜೆಪಿ ನಾಯಕ ಕೆಎಸ್‌ ಈಶ್ವರಪ್ಪ ವಿರುದ್ಧ ದೂರು ದಾಖಲಾಗಿದೆ.

ಕೆಎಸ್ ಈಶ್ವರಪ್ಪ ವಿರುದ್ಧ FIR ದಾಖಲು
ಕೆಎಸ್ ಈಶ್ವರಪ್ಪ ವಿರುದ್ಧ FIR ದಾಖಲು

By ETV Bharat Karnataka Team

Published : Feb 10, 2024, 7:06 AM IST

Updated : Feb 10, 2024, 7:12 AM IST

ದಾವಣಗೆರೆ:ದೇಶದ್ರೋಹಿ ಹೇಳಿಕೆ ನೀಡಿದವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿ ಎಂಬ ಹೇಳಿಕೆ ನೀಡಿರುವಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ದಾವಣಗೆರೆಯಲ್ಲಿ ಎಫ್ಐಆರ್​ ದಾಖಲಾಗಿದೆ. ಫೆ. 08 ರಂದು ನಗರದಲ್ಲಿ ನಡೆದ ಬಿಜೆಪಿ ಜಿಲ್ಲಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಈಶ್ವರಪ್ಪ ಅವರು ಈ ಹೇಳಿಕೆ ನೀಡಿದ್ದರು.

ಇಂತಹ ದೇಶದ್ರೋಹಿಗಳನ್ನು ಗುಂಡಿಕ್ಕಿ‌ ಕೊಲ್ಲುವ ಕಾನೂನು ತರಬೇಕು ಎಂಬ ಪ್ರಚೋದನಕಾರಿ ಹೇಳಿಕೆ ನೀಡಿದ್ದರಿಂದ ಸಮಾಜದಲ್ಲಿ ಬೇರೆ ಬೇರೆ ಸಮುದಾಯ, ಜನರ ಮಧ್ಯೆ ದ್ವೇಷ ಮತ್ತು ವೈಮನಸ್ಸು ಉಂಟಾಗುವ ಸಾಧ್ಯತೆ ದಟ್ಟವಾಗಿರುತ್ತದೆ ಎಂದು ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯ ನಿವಾಸಿ ಹನುಮಂತ ಎನ್ನುವರು ಬಡಾವಣೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಾಣ ಬೆದರಿಕೆ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದ್ದು, ಈ ದೂರು ಆಧರಿಸಿ ಈಶ್ವರಪ್ಪ ವಿರುದ್ಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ 505(1)(ಸಿ), 505(2), ಮತ್ತು 506 ಅಡಿ ಪ್ರಕರಣ ದಾಖಲಾಗಿದ್ದು, ಕ್ರಮ ಆಗಬೇಕು ಎಂದು ಎಫ್ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್​, "ದೇಶದ್ರೋಹಿ ಹೇಳಿಕೆ ನೀಡಿದವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬ ಹೇಳಿಕೆ ಸಂಬಂಧ ಕೆಎಸ್ ಈಶ್ವರಪ್ಪ ವಿರುದ್ಧ ಎಫ್​ಐಆರ್​ ದಾಖಲಾಗಿದೆ, ಪೊಲೀಸರು ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ" ಎಂದು ತಿಳಿಸಿದ್ದಾರೆ.

ಈಶ್ವರಪ್ಪ ವಿರುದ್ಧ ರಾಜ್ಯ ಕಾಂಗ್ರೆಸ್​ ಕೂಡ ಕಿಡಿಕಾರಿದೆ. ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಕಾಂಗ್ರೆಸ್‌ ''ಮಹಾತ್ಮ ಗಾಂಧಿಯವರಿಗೆ ಗುಂಡಿಕ್ಕಿದ ಗೋಡ್ಸೆ ಸಂತತಿಯವರಾದ ಕರ್ನಾಟಕ ಬಿಜೆಪಿ ನಾಯಕರ ಭಯೋತ್ಪಾದಕ ಮನಸ್ಥಿತಿ ಅನಾವರಣವಾಗಿದೆ. ಸಂಸದರಾದ ಡಿಕೆ ಸುರೇಶ್ ಹಾಗೂ ಶಾಸಕ ವಿನಯ್ ಕುಲಕರ್ಣಿ ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಎನ್ನುವ ಮೂಲಕ ಬಿಜೆಪಿಯ ಕೆಎಸ್ ಈಶ್ವರಪ್ಪ ಭಯೋತ್ಪಾದನೆಗೆ ಪ್ರಚೋದನೆ ನೀಡುವ ಹೇಳಿಕೆ ನೀಡಿದ್ದಾರೆ. ಈ ‘ಗುಂಡು’ ಹಾಕುವ ವ್ಯಕ್ತಿಯ ಮೇಲೆ ಭಯೋತ್ಪಾದನೆ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಗೃಹ ಸಚಿವರಲ್ಲಿ ಮನವಿ ಮಾಡುತ್ತೇವೆ'' ಎಂದಿದೆ.

ಘಟನೆ ಹಿನ್ನೆಲೆ:ಫೆ. 08 ರಂದು ನಗರದಲ್ಲಿ ನಡೆದ ಬಿಜೆಪಿ ಜಿಲ್ಲಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದ ಈಶ್ವರಪ್ಪ ಅವರು, ''ಸಂಸದ ಡಿಕೆ ಸುರೇಶ್, ಶಾಸಕ ವಿನಯ್ ಕುಲಕರ್ಣಿ ಇಬ್ಬರು ದೇಶದ್ರೋಹಿಗಳು. ಇಬ್ಬರನ್ನು ಪಕ್ಷದಿಂದ ಕಿತ್ತು ಬಿಸಾಕಬೇಕು. ಈ ವೇದಿಕೆಯಿಂದಲೇ ಇವರ ಹಾಗೆ ದೇಶ ವಿಭಜನೆಯ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುವೆ. ಈ ರೀತಿಯ ದೇಶ ವಿಭಜನೆ ಎಂಬುದು ಜವಾಹರಲಾಲ್ ನೆಹರು ಕಾಲದಿಂದ ಬಂದಿದೆ'' ಎಂದು ಖಾರವಾಗಿ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ:ತಾಕತ್ತಿದ್ದರೆ ಹೆಚ್.ಕೆ.ಪಾಟೀಲ್ ನನ್ನ ವಿರುದ್ಧ ಕೇಸ್​ ಹಾಕಲಿ: ಕೆ.ಎಸ್.ಈಶ್ವರಪ್ಪ

ದೂರಿಗೂ ಮುನ್ನ ಶಿವಮೊಗ್ಗದಲ್ಲಿ ಮಾತನಾಡಿದ್ದ ಕೆ ಎಸ್ ಈಶ್ವರಪ್ಪ, "ರಾಷ್ಟ್ರದ್ರೋಹಿಗಳನ್ನು ಗುಂಡಿಕ್ಕಿ‌ ಕೊಲ್ಲಿ ಎಂದಿರುವ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ. ತಾಕತ್ತಿದ್ದರೆ ನನ್ನ ವಿರುದ್ಧ ಕೇಸು ದಾಖಲಿಸಲಿ" ಎಂದಿದ್ದರು. ''ನಾನು ದಾವಣಗೆರೆಯಲ್ಲಿ ಹೇಳಿದ ಮಾತಿಗೆ ಬದ್ಧನಾಗಿದ್ದೇನೆ. ತಾಕತ್ತಿದ್ದರೆ ಕೇಸ್ ಹಾಕಲಿ'' ಎಂದು ಸವಾಲು ಹಾಕಿದ್ದರು.

Last Updated : Feb 10, 2024, 7:12 AM IST

ABOUT THE AUTHOR

...view details