ಮೈಸೂರು:ಮೈಸೂರು ನಗರದ ಹೊರವಲಯದ ಉದ್ಬೂರು ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಬಡಾವಣೆ ನಿರ್ಮಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂಬ ಆರೋಪದ ಹಿನ್ನೆಲೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಸೇರಿದಂತೆ ಆರು ಜನರ ವಿರುದ್ಧ ಬುಧವಾರ ಪ್ರಕರಣ ದಾಖಲಾಗಿದೆ. ಈ ಸಂಬಂಧ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ವಿರುದ್ಧ ಎಫ್ಐಆರ್ ದಾಖಲು ಮಾಡಿ, ತನಿಖೆ ಮಾಡುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ದಟ್ಟಗಳ್ಳಿ 3ನೇ ಹಂತದ ಸೋಮನಾಥ ನಗರದ ನಿವಾಸಿ ಎಂ.ಡಿ. ಅಭೀಶ್ ಸಾಗರ್ ಸಲ್ಲಿಕೆ ಮಾಡಿರುವ ದೂರಿನ ಮೇರೆಗೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಅವರ ಪತ್ನಿ ಎಲ್. ಕುಸುಮಾ, ಸರ್ವೇಯರ್‌ಗಳಾದ ರಮೇಶ್, ಮಾದೇಗೌಡ, ಮುಡಾ ಅಧಿಕಾರಿಗಳು ಮತ್ತು ನಿವೃತ್ತ ಪಿಡಿಒ, ಉದ್ಬೂರು ನಿವಾಸಿ ಮಹಂತಪ್ಪ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ದಾಖಲಾಗಿರುವ ದೂರಿಲ್ಲೇನಿದೆ?:ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಅವರ ಪತ್ನಿ ಕುಸುಮಾ ಹಾಗೂ ಅಧಿಕಾರಿಗಳು ಸೇರಿಕೊಂಡು ಉದ್ಬೂರು ಗ್ರಾಮದ ಸರ್ವೆ ನಂಬರ್ 315 ರಲ್ಲಿನ 4 ಎಕರೆ 32 ಗುಂಟೆ, ಸರ್ವೆ ನಂಬರ್ 317 ರಲ್ಲಿನ 4 ಎಕರೆ 29 ಗುಂಟೆ ಸೇರಿದಂತೆ ಒಟ್ಟು 9 ಎಕರೆ 21 ಗುಂಟೆ ಭೂಮಿಯಲ್ಲಿ ಕಾನೂನು ಬಾಹಿರವಾಗಿ ಬಡಾವಣೆ ನಿರ್ಮಾಣ ಮಾಡಲು ಯತ್ನಿಸಿದ್ದಾರೆ.
ಜನರಿಗೆ ವಂಚಿಸಲು ಮತ್ತು ಅಕ್ರಮವಾಗಿ ಹಣ ಗಳಿಸು ಉದ್ದೇಶದಿಂದ ಬಡಾವಣೆಯ ನಕಲಿ ಯೋಜನೆ, ನಕ್ಷೆ ಸಿದ್ಧಪಡಿಸಿದ್ದಾರೆ. ಸರ್ಕಾರದ ದಾಸ್ತವೇಜುಗಳನ್ನು ಖೊಟ್ಟಿಯಾಗಿ ಸೃಷ್ಟಿ ಮಾಡಿದ್ದಾರೆ. ಸರ್ಕಾರ ಮತ್ತು ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿಗಳ ವಿರುದ್ಧ ತನಿಖೆ ಮಾಡಿ ಎರಡು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಬೆಂಗಳೂರಿನ 42ನೇ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆದೇಶ ಮಾಡಿದೆ. ಈ ಕುರಿತು ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮಾವಿನ ಮರಗಳ ತೆರವು: ಅರಣ್ಯಾಧಿಕಾರಿಗಳಿಗೆ ಸಮನ್ಸ್