ಬೆಂಗಳೂರು: ರಾಜ್ಯ ವಕ್ಫ್ ಮಂಡಳಿಯ ಖಾತೆಯಲ್ಲಿನ ಹಣ ಅಕ್ರಮವಾಗಿ ವರ್ಗಾವಣೆ ಮಾಡಿರುವ ಆರೋಪದಡಿ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಝುಲ್ಫಿಕಾರುಲ್ಲಾ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಡಳಿಯ ಬ್ಯಾಂಕ್ ಖಾತೆಯಲ್ಲಿದ್ದ 4 ಕೋಟಿ 45 ಸಾವಿರ ರೂ. ಹಣವನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ ಎಂದು ಮುಖ್ಯ ಲೆಕ್ಕಾಧಿಕಾರಿ ಮೀರ್ ಅಹಮದ್ ಅಬ್ಬಾಸ್ ನೀಡಿರುವ ದೂರಿನನ್ವಯ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪವೇನು?:2016ರಲ್ಲಿ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಝುಲ್ಫಿಕಾರುಲ್ಲಾ ಮಂಡಳಿಯ ಗಮನಕ್ಕೆ ತರದೆ ಖಾತೆಯಲ್ಲಿದ್ದ 4 ಕೋಟಿ 45 ಸಾವಿರ ರೂ. ಹಣವನ್ನ ವರ್ಗಾಯಿಸಿರುವ ಆರೋಪವಿದೆ. ಬೆನ್ಸನ್ ಟೌನ್ನಲ್ಲಿರುವ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ವಕ್ಫ್ ಮಂಡಳಿಯ ಖಾತೆಯಿಂದ ಚೆಕ್ ಮೂಲಕ ವಿಜಯಾ ಬ್ಯಾಂಕ್, ಚಿಂತಾಮಣಿ ಶಾಖೆಯಲ್ಲಿರುವ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಖಾತೆಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.